ನವದೆಹಲಿ ತಕ್ಷಣದಿಂದಲೇ ಜಾರಿಗೆ ಬರುವಂತೆ ದ್ವೇಷ ಭಾಷಣಗಳ ವಿರುದ್ಧ ಎಲ್ಲಾ ರಾಜ್ಯ ಸರ್ಕಾರಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳು ಸ್ವಯಂಪ್ರೇರಿತ ಎಫ್‌ಐಆರ್ ದಾಖಲಿಸಿಕೊಂಡು ತನಿಖೆ ನಡೆಸಬೇಕು ಎಂದು ಸುಪ್ರೀಂಕೋರ್ಟ್ ಮಹತ್ವದ ಆದೇಶ ನೀಡಿದೆ. ಕೇಸು ದಾಖಲಿಸದಿದ್ದರೆ ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಲಾಗುವುದು ಎಂಬ ಖಡಕ್ ಎಚ್ಚರಿಕೆಯನ್ನೂ ನೀಡಿದೆ.
ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಿವಾದಿತ ಹೇಳಿಕೆ ನೀಡಿದ ಸಮಯದಲ್ಲೇ ಈ ಆದೇಶ ಹೊರಬಿದ್ದಿರುವುದು ಮಹತ್ವ ಪಡೆದಿದೆ. ಅಲ್ಲದೆ ಕರ್ನಾಟಕದ ವಿಧಾನಸಭೆ ಚುನಾವಣೆ ಪ್ರಚಾರದ ವೇಳೆ ದ್ವೇಷ ಭಾಷಣ ಮಾಡುವ ಎಲ್ಲ ರಾಜಕಾರಣಿಗಳಿಗೂ ಈ ಆದೇಶದಿಂದ ಬಿಸಿ ಮುಟ್ಟುವ ಸಾಧ್ಯತೆಯಿದೆ.
ಧರ್ಮ,ವ್ಯಕ್ತಿ ನೋಡಬೇಡಿ ಮುಲಾಜಿಲ್ಲದೇ ಕೇಸ್ ಹಾಕಿ,:
ಕಳೆದ ವರ್ಷದ ಅಕ್ಟೋಬರ್‌ನಲ್ಲಿ ದೆಹಲಿ, ಉತ್ತರಾಖಂಡ ಹಾಗೂ ಉತ್ತರ ಪ್ರದೇಶಕ್ಕೆ ಸಂಬಂಧಿಸಿದ ಪ್ರಕರಣಗಳಲ್ಲಿ ಸುಪ್ರೀಂಕೋರ್ಟ್ ಆ ರಾಜ್ಯ ಸರ್ಕಾರಗಳಿಗೆ ನಿಮ್ಮ ವ್ಯಾಪ್ತಿಯಲ್ಲಿ ದ್ವೇಷ ಭಾಷಣಗಳ ವಿರುದ್ಧ ಸ್ವಯಂಪ್ರೇರಿತ ಕೇಸ್ ದಾಖಲಿಸಬೇಕು ಎಂದ ಆದೇಶ ನೀಡಿತ್ತು. ಅದೇ ಆದೇಶವನ್ನು ಶುಕ್ರವಾರ ದೇಶದ ಎಲ್ಲಾ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳಿಗೆ ವಿಸ್ತರಿಸಿದೆ.
‘ದ್ವೇಷ ಭಾಷಣ ಮಾಡುವ ವ್ಯಕ್ತಿ ಯಾರೇ ಆದರೂ ಸರಿ, ಯಾವುದೇ ಧರ್ಮಕ್ಕೆ ಸೇರಿದವರಾಗಿದ್ದರೂ ಸರಿ, ಅವರ ವಿರುದ್ಧ ಎಫ್‌ಐಆರ್ ದಾಖಲಿಸಬೇಕು. ಯಾರಾದರೂ ದೂರು ನೀಡಲಿ ಎಂದು ಕಾಯುವಂತಿಲ್ಲ’ ಎಂದೂ ಸುಪ್ರೀಂಕೋರ್ಟ್‌ನ ಕೆ.ಎಂ.ಜೋಸೆಫ್ ಮತ್ತು ಬಿ.ವಿ.ನಾಗರತ್ನ ಅವರ ಪೀಠ ತಾಕೀತು ಮಾಡಿದೆ.
ದ್ವೇಷ ಭಾಷಣಗಳು ಅತ್ಯಂತ ಅಪಾಯಕಾರಿ. ಭಾರತದ ಸಂವಿಧಾನದ ಪೀಠಿಕೆಯಲ್ಲಿ ಹೇಳಲಾದ ದೇಶದ ಜಾತ್ಯತೀತ ತತ್ವವನ್ನು ರಕ್ಷಿಸಲು ಇಂತಹ ಭಾಷಣಗಳ ವಿರುದ್ಧ ಧರ್ಮಾತೀತವಾಗಿ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ದೇಶದ ವಿವಿಧೆಡೆ ದ್ವೇಷ ಭಾಷಣಗಳು ಹೆಚ್ಚುತ್ತಿದ್ದು, ಅವುಗಳ ನಿಯಂತ್ರಣಕ್ಕೆ ಆದೇಶ ಹೊರಡಿಸಬೇಕು ಎಂದು ಕೋರಿ ಸುಪ್ರೀಂಕೋರ್ಟ್‌ನಲ್ಲಿ ಹಲವಾರು ಅರ್ಜಿಗಳು ಸಲ್ಲಿಕೆಯಾಗಿದ್ದವು. ಅವುಗಳ ವಿಚಾರಣೆಯ ವೇಳೆ ಶುಕ್ರವಾರ ಕೋರ್ಟ್ ಈ ಮೇಲಿನ ಆದೇಶ ನೀಡಿದ್ದು, ಮುಂದಿನ ವಿಚಾರಣೆಯನ್ನು ಮೇ 12ಕ್ಕೆ ನಿಗದಿಪಡಿಸಿದೆ.