ಕಾರ್ಕಳ: ನಂದಳಿಕೆ ಎನ್ನುವ ಊರು ಯಾರಿಗೆ ತಾನೇ ಗೊತ್ತಿಲ್ಲ ಹೇಳಿ.ಕನ್ನಡ ನವೋದಯದ ಮುಂಗೋಳಿ ಎಂದೇ ಖ್ಯಾತ ನಾಮರಾದ ಕನ್ನಡ ಸಾಹಿತ್ಯಲೋಕದ ಸಾಹಿತಿ ಹಾಗೂ ಕವಿ ಮುದ್ದಣ ಜನಿಸಿದ ಪುಣ್ಯಭೂಮಿ ಕಾರ್ಕಳ ತಾಲೂಕಿನ ನಂದಳಿಕೆಯಾಗಿದೆ.
ಇಂತಹ ಪುಣ್ಯಭೂಮಿ ನಂದಳಿಕೆಯು ಸಾಹಿತ್ಯಕ್ಷೇತ್ರದ ಜತೆಗೆ ಮಹಾಲಿಂಗೇಶ್ವರನ ಸನ್ನಿಧಿಯಲ್ಲಿನ ಅಬ್ಬಗ-ದಾರಗ ಸರಿಜಾತ್ರೆಯ ಮೂಲಕ ಧಾರ್ಮಿಕ ಕ್ಷೇತ್ರದಲ್ಲೂ ರಾಜ್ಯಾದ್ಯಂತ ಹೆಸರು ಮಾಡಿದೆ. ನಂದಳಿಕೆಯು ಆಲಡೆಕ್ಷೇತ್ರವಾಗಿರುವ ಹಿನ್ನಲೆಯಲ್ಲಿ ಸಿರಿಜಾತ್ರೆಗೆ ಉಡುಪಿ, ದಕ್ಷಿಣ ಕನ್ನಡ,ಚಿಕ್ಕಮಗಳೂರು,ಶಿವಮೊಗ್ಗ,ಹಾಸನ,ಶೃಂಗೇರಿ ಮುಂತಾದ ಕಡೆಗಳಿಂದ ಲಕ್ಷಾಂತರ ಭಕ್ತಾಧಿಗಳು ಬಂದು ಹರಕೆ ಸಮರ್ಪಿಸಿ ದೇವರ ದರ್ಶನ ಪಡೆಯುತ್ತಾರೆ.

ವರ್ಷಂಪ್ರತಿ ನಡೆಯುವ ಸಿರಿಕುಮಾರ ಹಾಗೂ ಅಬ್ಬಗ-ದಾರಗ ಸಿರಿಜಾತ್ರೆಯ ಪ್ರಚಾರವನ್ನು ಇಲ್ಲಿನ ಆಡಳಿತ ಮೊಕ್ತೇಸರರಾದ ಸುಹಾಸ್ ಹೆಗ್ಡೆಯವರು ಕಳೆದ ಹಲವಾರು ವರ್ಷಗಳಿಂದ ಅತ್ಯಂತ ವಿನೂತನವಾಗಿ ಮಾಡಿಕೊಂಡು ಬಂದಿದ್ದಾರೆ. ಈ ಹಿಂದೆ ಸಿರಿಜಾತ್ರೆಯ ಪ್ರಚಾರಕ್ಕಾಗಿ ರಸ್ತೆ ಬದಿಯಲ್ಲಿ ಮೈಲಿಗಲ್ಲು, ಕೊಡೆ,ಬಣ್ಣದ ಚಿಟ್ಟೆಯ ಆಕೃತಿ,ಫೋಟೋ ಫ್ರೇಮ್ ಮೂಲಕ ವಿನೂತನ ಪ್ರಚಾರದ ಕೈಗೊಳ್ಳಲಾಗಿದ್ದು, ಈ ಬಾರಿ ಏಪ್ರಿಲ್ 6ರಂದು ನಡೆಯಲಿರುವ ನಂದಳಿಕೆ ಸಿರಿಜಾತ್ರಾ ಮಹೋತ್ಸವದ ಪ್ರಚಾರಕ್ಕಾಗಿ ಕಾಗದ ಬಾಕ್ಸ್ ಆಕೃತಿ ಮಾಡಿ ಅದರ ಮೇಲ್ಬಾಗದಲ್ಲಿ ಮಣ್ಣಿನ ಪಾತ್ರೆ ಇಡಲಾಗಿದೆ. ಕಾಗದ ಬಾಕ್ಸಿನ ಸುತ್ತ ನಂದಳಿಕೆ ಸಿರಿಜಾತ್ರೆಯ ವಿವರವನ್ನು ಮುದ್ರಿಸಲಾಗಿದೆ. ಈ ಪ್ರಚಾರದಿಂದ ಕೇವಲ ಧಾರ್ಮಿಕತೆಗೆ ಮಾತ್ರ ಒತ್ತು ನೀಡಿಲ್ಲ ಜತೆಗೆ ಮಣ್ಣಿನ ಪಾತ್ರೆಯಲ್ಲಿ ಹಕ್ಕಿಗಳಿಗೆ ನೀರುಣಿಸುವ ಮೂಲಕ ಪ್ರಾಣಿಪಕ್ಷಿ ಸಂಕುಲದ ರಕ್ಷಣೆಯ ಜತೆಗೆ ಕಾಗದ ಹಾಗೂ ಆವೆಮಣ್ಣು ಬಳಸಿ ಪರಿಸರ ಜಾಗೃತಿ ಮೂಡಿಸಲಾಗುತ್ತಿದೆ.

ಧಾರ್ಮಿಕ ಉತ್ಸವದ ಜತೆಗೆ ಪರಿಸರ ಜಾಗೃತಿಯಾಗಬೇಕು: ನಂದಳಿಕೆ ಛಾವಡಿ ಅರಮನೆ ಸುಹಾಸ್ ಹೆಗ್ಡೆ
ನಂದಳಿಕೆಯ ಸಿರಿಜಾತ್ರಾ ಮಹೋತ್ಸವಕ್ಕೆ ರಾಜ್ಯದ ನಾನಾಭಾಗಗಳಿಂದ ಸುಮಾರು 1.50 ಲಕ್ಷಕ್ಕೂ ಮಿಕ್ಕಿ ಭಕ್ತರು ಆಗಮಿಸುತ್ತಾರೆ.ನಂದಳಿಕೆ ಕ್ಷೇತ್ರವು ಧಾರ್ಮಿಕ ಸಾಮರಸ್ಯ ಸಾರುವ ಜತೆಗೆ ಪರಿಸರ ಜಾಗೃತಿಯನ್ನು ಮೂಡಿಸುವ ಉದ್ದೇಶದಿಂದ ಪ್ರತೀವರ್ಷ ಇಲ್ಲಿನ ಸಿರಿಜಾತ್ರೆ ಪ್ರಚಾರವನ್ನು ಅತ್ಯಂತ ವಿಭಿನ್ನವಾಗಿ ಪರಿಸರಸ್ನೇಹಿಯಾಗಿ ಮಾಡಲಾಗುತ್ತಿದೆ ಎಂದು ನಂದಳಿಕೆ ಮಹಾಲಿಂಗೇಶ್ವರ ದೇವಳದ ಆಡಳಿತ ಮೊಕ್ತೇಸರ ಛಾವಡಿ ಅರಮನೆಯ ಸುಹಾಸ್ ಹೆಗ್ಡೆ ಹೇಳುತ್ತಾರೆ.
ಒಟ್ಟಿನಲ್ಲಿ ಧಾರ್ಮಿಕವಾಗಿ ಪ್ರಸಿದ್ದಿ ಪಡೆದಿರುವ ಕಾರ್ಕಳ ತಾಲೂಕಿನ ನಂದಳಿಕೆ ಸಿರಿಜಾತ್ರಾ ವೈಭವದಲ್ಲಿ ಪರಿಸರ ಜಾಗೃತಿಯ ಜತೆಗೆ ಪ್ರಾಣಿಪಕ್ಷಿ ಸಂಕುಲವನ್ನು ಸಂರಕ್ಷಿಸುವ ಕಾರ್ಯ ಸಾರ್ವಜನಿಕರ ಪ್ರಶಂಸೆಗೆ ಪಾತ್ರವಾಗಿದೆ.

