Share this news

ಬೆಂಗಳೂರು: ವಿಕ್ಟೋರಿಯಾ ಆಸ್ಪತ್ರೆಯ ಸರ್ಕಾರಿ ಶುಶ್ರೂಷಾ ಶಾಲೆಯ ಪ್ರಾಂಶುಪಾಲ ಹುದ್ದೆಗೆ ಅನರ್ಹ ಅಧಿಕಾರಿಯನ್ನು ನೇಮಿಸಿರುವುದು ತಡವಾಗಿ ಬೆಳಕಿಗೆ ಬಂದಿದೆ.

ಕರ್ನಾಟಕ ರಾಜ್ಯ ಶುಶ್ರೂಷಾ ಪರೀಕ್ಷಾ ಮಂಡಳಿಯ ಕಾರ್ಯದರ್ಶಿ ಹುದ್ದೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಮಡಿವಾಳಪ್ಪ ಅವರನ್ನು, ಸೆ.27ರಂದು ವಿಕ್ಟೋರಿಯಾ ಆಸ್ಪತ್ರೆಯ ಸರ್ಕಾರಿ ಶುಶ್ರೂಷಾ ಶಾಲೆಯ ಪ್ರಾಂಶುಪಾಲ ಹುದ್ದೆಗೆ ಪ್ರಭಾರದಲ್ಲಿ ನೇಮಿಸಿ ಸರ್ಕಾರವೇ ಆದೇಶ ಹೊರಡಿಸಿದೆ. ಇದು ವಿವಾದಕ್ಕೆ ಏಡೆಮಾಡಿಕೊಟ್ಟಿದೆ.

2006ರ ಡಿಸೆಂಬರ್‌ನಲ್ಲಿ ಇಂದಿರಾಗಾಂಧಿ ನ್ಯಾಷಿನಲ್ ಮುಕ್ತ ವಿಶ್ವವಿದ್ಯಾಲಯದಲ್ಲಿ ಇವರು, ಪಿಬಿಬಿಎಸ್ಸಿ ನರ್ಸಿಂಗ್ ಕೋರ್ಸ್‌ಗೆ ಪ್ರವೇಶ ಪಡೆದು 2013ರಲ್ಲಿ ಈ ಕೋರ್ಸ್ ಮುಗಿಸಿದ್ದಾರೆ. ಆದರೆ, 2013ರಲ್ಲಿ ಪಿಬಿಬಿಎಸ್ಸಿ ನರ್ಸಿಂಗ್ ಪದವಿಯನ್ನು ರಾಜೀವ್ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯ (RGUHS) ಅಧೀನದ ಕೆಎಲ್‌ಇಎಸ್ ಕಾಲೇಜಿನಲ್ಲಿ ಓದಿರುವುದಾಗಿ ಸರ್ಕಾರಕ್ಕೆ ನಕಲಿ ದಾಖಲೆ ಸಲ್ಲಿಸಿದ್ದಾರೆ. ಅಲ್ಲದೆ, ನಕಲಿ ದಾಖಲೆಯ ಆಧಾರದ ಮೇರೆಗೆ ಸರ್ಕಾರಿ ಖೋಟಾದಲ್ಲಿ ನೂರ್ ಕಾಲೇಜು ಆಫ್ ನರ್ಸಿಂಗ್‌ನಲ್ಲಿ ಎಂಎಸ್ಸಿ ಪದವಿ ಮುಗಿಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ, ನಂತರ, ಕರ್ನಾಟಕ ರಾಜ್ಯ ನರ್ಸಿಂಗ್ ಪರಿಷತ್ತಿನಲ್ಲಿ ದೃಢೀಕರಣ ಪತ್ರ ಪಡೆದಿದ್ದಾರೆ. ಸರ್ಕಾರಕ್ಕೆ ನಕಲಿ ದಾಖಲೆ ಸಲ್ಲಿಸಿ ಕಾನೂನುಬಾಹಿರವಾಗಿ ಈ ಎರಡು ಹುದ್ದೆಗಳಲ್ಲಿ ಕುಳಿತು ಮಡಿವಾಳಪ್ಪ ಕಾರ್ಯಭಾರ ಮಾಡುತ್ತಿರುವುದು ಎಲ್ಲರನ್ನೂ ಹುಬ್ಬೇರಿಸುವಂತೆ ಮಾಡಿದೆ.

ಮಡಿವಾಳಪ್ಪ ಸೇರಿ ಮೂವರು ಅಧಿಕಾರಿಗಳು, ಹಿಂದೆ ತಮ್ಮ ಅಧಿಕಾರ ದುರ್ಬಳಕೆ ಮಾಡಿಕೊಂಡು ನಿಯಮಬಾಹಿರವಾಗಿ ನೂರಕ್ಕೂ ಹೆಚ್ಚು ನರ್ಸಿಂಗ್ ಕಾಲೇಜುಗಳನ್ನು ಆರಂಭಿಸಲು ಅನುಮತಿ ಕೊಟ್ಟಿರುವುದು ಗಂಭೀರ ಆರೋಪಗಳಿವೆ. ಒಂದೇ ದಿನಾಂಕ, ಒಂದೇ ದಿನದಂದು ಬೆಂಗಳೂರು, ಬೆಳಗಾವಿ, ಕಲಬುರಗಿ, ಬೀದರ್ ಮತ್ತು ಯಾದಗಿರಿ ಸೇರಿ ರಾಜ್ಯದ ಇತರೆ ಜಿಲ್ಲೆಗಳಲ್ಲಿ ನರ್ಸಿಂಗ್ ಕಾಲೇಜು ಆರಂಭಿಸಿರುವ ಅನುಮತಿ ನೀಡಿದ್ದಾರೆ. ಇದರಲ್ಲಿ ಅಕ್ರಮ ನಡೆದಿರುವುದು ಸಾಬೀತಾಗಿದೆ. ಈ ಸಂಬಂಧ ಪರಿಶೀಲನೆ ವರದಿಯನ್ನು ರಾಜ್ಯ ಸರ್ಕಾರಕ್ಕೆ ಸಲ್ಲಿಸಲಾಗಿದೆ. ಪಿಎಸ್‌ಐ ಹಗರಣದಲ್ಲಿ ಕರ್ನಾಟಕ ರಾಜ್ಯ ನರ್ಸಿಂಗ್ ಪರಿಷತ್ತು ಇರುವುದು ಸಾಬೀತಾಗಿದೆ. ವೈದ್ಯಕೀಯ ಶಿಕ್ಷಣ ಇಲಾಖೆ ಸಚಿವ ಡಾ. ಶರಣ ಪ್ರಕಾಶ್ ಪಾಟೀಲ್ ಅವರಿಗೆ ಕೊಟ್ಟಿರುವ ಅರ್ಜಿಯಲ್ಲಿ 16 ವರ್ಷಗಳಿಂದ ಬೋಧನಾ ಅನುಭವ ಇದೆಯೆಂದು ನಮೂದಿಸಿದ್ದಾರೆ. ಜತೆಗೆ, ನಕಲಿ ಪ್ರಮಾಣ ಪತ್ರ ಕೊಟ್ಟು ಅರ್ಜಿಯಲ್ಲಿ ಸಚಿವರಿಂದ ಸಹಿ ಪಡೆದಿದ್ದಾರೆ. ಇಂಥ ಅಧಿಕಾರಿ ವಿರುದ್ಧ ಸರ್ಕಾರ ಕಠಿಣ ಕ್ರಮಕೈಗೊಳ್ಳಬೇಕೆಂದು ಸಾರ್ವಜನಿಕ ವಲಯದಲ್ಲಿ ಒತ್ತಾಯ ಕೇಳಿಬಂದಿದೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *