ಬೆಂಗಳೂರು:ಕೇವಲ ಉಚಿತ ಗ್ಯಾರಂಟಿಗಳ ಮೂಲಕ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರದ ಬಣ್ಣ ಒಂದೇ ವಾರದಲ್ಲಿ ಬಯಲಾಗಿದೆ ಎಂದು ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.ಎಲ್ಲರಿಗೂ ಕಾಂಗ್ರೆಸ್ ಸರ್ಕಾರದ ಗ್ಯಾರಂಟಿಗಳು ಉಚಿತ ಎನ್ನುತ್ತಿದ್ದವರು ಈ ಷರತ್ತು ವಿಧಿಸುತ್ತಿರುವುದು ಖಂಡನೀಯ ಎಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿಕೆಶಿ ವಿರುದ್ಧ ಕುಮಾರಸ್ವಾಮೀ ವಾಗ್ದಾಳಿ ನಡೆಸಿದ್ದಾರೆ.
ಅವರು ವಿಧಾನಸೌಧದಲ್ಲಿ ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಮೊದಲ ಸಂಪುಟ ಸಭೆಯಲ್ಲಿಯೇ ಗ್ಯಾರಂಟಿಗಳನ್ನು ಜಾರಿಗೆ ತಂದೇ ತರುತ್ತೇವೆ ಎಂದು ಹೇಳಿದ್ದ ಈಗಿನ ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳು ಈಗ ವರಸೆ ಬದಲಿಸಿ, ಷರತ್ತುಗಳು ಅನ್ವಯ ಆಗುತ್ತವೆ ಎನ್ನುತ್ತಿದ್ದಾರೆ, ಚುನಾವಣಾ ಪ್ರಚಾರ ಸಭೆಗಳಲ್ಲಿ ನನಗೂ ಉಚಿತ,ನಿಮಗೂ ಉಚಿತ ಎಂದವರು ಈಗ ಮಾತಿಗೆ ತಪ್ಪಿದ್ದಾರೆ ಎಂದು ಕುಮಾರಸ್ವಾಮಿ ಕುಟುಕಿದರು. ಗ್ಯಾರಂಟಿಗಳ ಭರವಸೆ ನೀಡಿದ್ದೀರಿ. ಜಾರಿ ಮಾಡಿ ಎಂದು ಜನರು ಕೇಳುತ್ತಿದ್ದಾರೆ. ವಿದ್ಯುತ್ ಬಿಲ್ ಕಟ್ಟುತ್ತಿಲ್ಲ, ಬಸ್ ಟಿಕೆಟ್ ಪಡೆಯಲು ನಿರಾಕರಿಸುತ್ತಿದ್ದಾರೆ. ನುಡಿದಂತೆ ನಡೆಯಬೇಕು, ಮಾತು ತಪ್ಪಿದರೆ ಜನರಿಗೆ ಮೋಸ ಮಾಡಿದಂತಾಗುತ್ತದೆ ಎಂದರು
ನಾವು ಜನರ ಪರ ನಿಲ್ಲುತ್ತೇವೆ.ನಾನು ಕೊಟ್ಟ ಮಾತು ತಪ್ಪಲ್ಲ, ಮಾತಿಗೆ ತಪ್ಪಿದರೆ ಒಂದು ಕ್ಷಣವೂ ಅಧಿಕಾರದಲ್ಲಿ ಇರಲ್ಲ ಅಂದಿದ್ದಾರೆ ಅವರು. ಅವರೆಲ್ಲ ಮಾಡಿರುವ ಭಾಷಣಗಳನ್ನು ಜನರು ನೋಡಿದ್ದಾರೆ, ಕೇಳಿದ್ದಾರೆ. ಎಲ್ಲರಿಗೂ ವಿದ್ಯುತ್ ಉಚಿತ ಎಂದು ಭಾಷಣದಲ್ಲಿ ಹೇಳಿದ್ದರು. ಈಗ ನೋಡಿದರೆ, ಅದಕ್ಕೆ ಮಾರ್ಗಸೂಚಿ ರಚನೆ ಆಗಬೇಕು ಎನ್ನುತ್ತಿದ್ದಾರೆ. ಅವತ್ತು ವೀರಾವೇಶದಲ್ಲಿ ಮಾತಾಡಿ ಚಪ್ಪಾಳೆ ಗಿಟ್ಟಿಸಿಕೊಂಡರು. ಒಂದೇ ವಾರದಲ್ಲಿ ಅವರ ನಿಜವಾದ ಬಣ್ಣ ಬಯಲಾಗ್ತಿದೆ. ಇವರು ಜನರ ಭಾವನೆಗಳ ಜತೆ ಚೆಲ್ಲಾಟ ಆಡುತ್ತಿದ್ದಾರೆ. ಕಾದು ನೋಡೋಣ. ನಂತರ ಜನತೆಯ ಜತೆ ಸೇರಿ ಯಾವ ರೀತಿ ಹೋರಾಟ ಮಾಡಬೇಕೋ ಮಾಡುತ್ತೇನೆ ಎಂದು ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು
.
ಹಾದಿ ಬೀದಿಯಲ್ಲಿ ಹೋಗೋರಿಗೆಲ್ಲಾ ಗ್ಯಾರಂಟಿ ಯೋಜನೆ ಕೊಡಕ್ಕಾಗಲ್ಲ ಎಂಬ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಹೇಳಿಕೆಯನ್ನು ಒಪ್ಪಲಾಗದು, ಚುನಾವಣೆ ಸಂದರ್ಭದಲ್ಲಿ ಉಚಿತ ಗ್ಯಾರಂಟಿಗಳ ಭರವಸೆ ನೀಡಿ ಜನರನ್ನು ಮೋಸ ಮಾಡಿದ್ದೀರಿ, ಈಗ ಮತ ಕೊಟ್ಟವರೆಲ್ಲಾ ಹಾದಿಬೀದಿಯವರು ಆಗಿಬಿಟ್ಟರೇ ಎಂದು ಮಾಜಿ ಸಿಎಂ ಆಕ್ರೋಶ ವ್ಯಕ್ತಪಡಿಸಿದರು.