ಬೆಂಗಳೂರು: ತಾವೆಲ್ಲ ನಿನ್ನ ಸುದ್ದಿ ಮಾಧ್ಯಮದಲ್ಲಿ ನಿರೀಕ್ಷೆ ಮಾಡಿದಂತೆ ಕನ್ನಡದ ನಟ ಸುದೀಪ್ ಅವರು ಯಾವುದೇ ಪಕ್ಷಕ್ಕೆ ಸೇರದಿದ್ದರೂ ನನ್ನ ಜೊತೆಗೆ ಬಿಜೆಪಿ ಪರವೂ ಪ್ರಚಾರ ನಡೆಸಲಿದ್ದಾರೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸುದೀಪ್ ಅವರು ರಾಜಕೀಯದಲ್ಲಿಲ್ಲ, ಚಲನಚಿತ್ರದಲ್ಲಿದ್ದಾರೆ. ಸುದೀಪ್ ಚಲನಚಿತ್ರ ರಂಗದಲ್ಲಿ ಒಳ್ಳೆಯ ಸಾಧನೆ ಮಾಡಿದ್ದಾರೆ. ನಮ್ಮ ಪಕ್ಷಕ್ಕೆ ಸೇರದೆ ಇದ್ದರೂ ನಿನ್ನ ಪ್ರಚಾರದ ಅಗತ್ಯವಿದೆ ಎಂದಿದ್ದೇನೆ. ಹೀಗಾಗಿ ಅವರು ಯಾವುದೇ ರಾಜಕೀಯ ಪಕ್ಷಕ್ಕೆ ಸೇರದೆ ನನಗೆ ಬೆಂಬಲ ಕೊಡುತ್ತಿದ್ದಾರೆ. ನನ್ನ ಜೊತೆಗೆ ನಮ್ಮ ಪಕ್ಷಕ್ಕೂ ಪ್ರಚಾರ ಮಾಡುತ್ತಾರೆ ಎಂದರು.
ನಾನು ಹೇಳಿದ ಕಡೆ ನಟ ಸುದೀಪ್ ಪ್ರಚಾರ ಮಾಡುತ್ತಾರೆ. ನನ್ನ ಮೇಲಿನ ಪ್ರೀತಿ ವಿಶ್ವಾಸದಿಂದ ಸುದೀಪ್ ಪ್ರಚಾರ ಮಾಡುತ್ತಾರೆ. ಇವರ ಪ್ರಚಾರದಿಂದ ನಮ್ಮ ಪಕ್ಷಕ್ಕೆ ದೊಡ್ಡ ಶಕ್ತಿ ಬರುತ್ತದೆ . ಸುದೀಪ್ ಅವರು ನನ್ನ ಪರವಾಗಿ ಇದ್ದಾರೆ. ನಾನು ಬಿಜೆಪಿಯೊಳಗೆ ಇದ್ದೇನೆ, ಮುಖ್ಯಮಂತ್ರಿ ಆಗಿದ್ದೇನೆ. ನಾನು ಯಾರಿಗೆ ಹೇಳುತ್ತೇನೋ ಅವರ ಪರ ಸುದೀಪ್ ಪ್ರಚಾರ ಮಾಡುತ್ತಾರೆ. ಸುದೀಪ್ ಪ್ರಚಾರಕ್ಕೆ ಸಂಬಂಧಿಸಿದಂತೆ ರೂಪರೇಷೆ ಸಿದ್ಧಪಡಿಸುತ್ತೇವೆ 15 ದಿನಗಳ ಕಾಲ ಪ್ರಚಾರಕಾರ್ಯದಲ್ಲಿ ತೊಡಗುತ್ತಾರೆ ಎಂದರು.
ನಟ ಕಿಚ್ಚ ಸುದೀಪ್ ಮಾತನಾಡಿ, ಬಸವರಾಜ ಬೊಮ್ಮಾಯಿಯವರಿಗೆ ನನ್ನ ಬೆಂಬಲ ನೀಡಲು ಇಷ್ಟಪಡುತ್ತೇನೆ ಎಂದು ಘೋಷಿಸಿದ್ದಾರೆ. ಕಷ್ಟದ ದಿನಗಳಲ್ಲಿ ನನ್ನ ಜೊತೆಗೆ ನಿಂತಿದ್ದು ಸಿಎಂ ಬೊಮ್ಮಾಯಿಯವರು. ನಾನು ಚಿಕ್ಕವಯಸ್ಸಿನಿಂದ ಅವರನ್ನು ನೋಡಿದ್ದೇನೆ. ಚಿತ್ರರಂಗಕ್ಕೆ ಬಂದಾಗ ಕೆಲವೇ ಕೆಲವರು ನನ್ನಪರ ನಿಂತಿದ್ದರು. ಅಂಥಹವರು ನನ್ನ ಮಾಮ ಸಿಎಂ ಬೊಮ್ಮಾಯಿ. ನಾನು ಅವರ ಪರವಾಗಿ ನಿಲ್ಲಲು ಬಂದೆ. ನಾನು ಚಿತ್ರರಂಗ ಪ್ರವೇಶಿಸುವಾಗ ಗಾಡ್ ಫಾದರ್ ಅಂತ ಯಾರು ಇರಲಿಲ್ಲ. ಆ ಟೈಮ್ಲ್ಲಿ ಅವರು ನನ್ನ ಪರ ಇದ್ದರು. ಹೀಗಾಗಿ ನಾನು ಆ ವ್ಯಕ್ತಿ ಪರ ಬೆಂಬಲ ಕೊಡೋಕೆ ಬಂದಿದ್ದೀನಿ. ಹಾಗೆ ಕೆಲ ಸ್ನೇಹಿತರು ಇದ್ದಾರೆ ನಾನು ಅವರ ಪರ ನಿಲ್ಲುತ್ತೇನೆ ಎಂದರು.
ನನಗೆ ಎಲ್ಲ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆಗಲ್ಲ. ಪಕ್ಷ ಅಂತಾ ಇಲ್ಲಿಗೆ ಬಂದಿಲ್ಲ, ವ್ಯಕ್ತಿಯ ಕಾಳಜಿಗೆ ಬಂದಿದ್ದೇನೆ. ಹಣಕ್ಕಾಗಿ ನಾನು ಚುನಾವಣಾ ಪ್ರಚಾರ ಮಾಡುತ್ತಿಲ್ಲ. ಸಿಎಂ ಬಸವರಾಜ ಬೊಮ್ಮಾಯಿ ಅವರಿಗೆ ಮಾತ್ರ ನನ್ನ ಬೆಂಬಲ. ನಾನು ಚುನಾವಣೆಯಲ್ಲಿ ಸ್ಪರ್ಧೆ ಮಾಡಲ್ಲ. ನಾನು ಯಾವುದೇ ಕಾರಣಕ್ಕೂ ರಾಜಕೀಯ ಪ್ರವೇಶ ಮಾಡಲ್ಲ. ಕನ್ನಡ ಚಿತ್ರರಂಗದಲ್ಲಿ ಕೆಲಸ ಮಾಡುವುದು ಸಾಕಷ್ಟು ಇದೆ ಎಂದು ರಾಜಕಾರಣಕ್ಕೆ ಬರುವ ವಂದತಿಗಳಿಗೆ ತೆರೆ ಎಳೆದಿದ್ದಾರೆ.