Share this news

ಮಂಡ್ಯ :  ಇಂದಿನಿಂದ ನನ್ನ ಸಂಪೂರ್ಣವಾದ ಬೆಂಬಲ ನರೇಂದ್ರ ಮೋದಿ ಅವರ ಸರ್ಕಾರಕ್ಕೆ ಮಾಡುವೆ ಎನ್ನುವ ಮೂಲಕ ಇಂದು ಸಂಸದೆ ಸುಮಲತಾ ಅಂಬರೀಷ್‌ ಅಧಿಕೃತವಾಗಿ ಬಿಜೆಪಿ  ಪಕ್ಷಕ್ಕೆ ಸೇರ್ಪಡೆ ಬಗ್ಗೆ ಮಹತ್ವದ ಘೋಷಣೆ ಮಾಡಿದ್ದಾರೆ. 

ಮಂಡ್ಯ ಚಾಮುಂಡೇಶ್ವರಿ ನಗರದ ಸುಮಲತಾ ಅಂಬರೀಷ್‌ ನಿವಾಸದಲ್ಲಿ ಸುದ್ದಿಗೋಷ್ಟಿಯಲ್ಲಿ ಸುಮಲತಾ ಅಂಬರೀಷ್‌, ತಾವು ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ದಾಖಲೆ ಸಮೇತ ತಿಳಿಸಿ ಬಿಜೆಪಿ ಸೇರೋದನ್ನು ಖಚಿತಪಡಿಸಿದ್ದಾರೆ. ಮೋದಿ ನಾಯಕತ್ವದಲ್ಲಿ ಮಾತ್ರವೇ ದೇಶದಲ್ಲಿ ಅಭಿವೃದ್ಧಿ ಸಾಧ್ಯ. ನನ್ನ ಹಲವು ಹೋಜನೆಗಳಿಗೆ ಕೇಂದ್ರದಿಂದ ಅಪಾರ ನೆರವು ಸಿಕ್ಕಿದೆ. ಮಂಡ್ಯದ ಅಭಿವೃದ್ಧಿ ದೃಷ್ಟಿಯಿಂದ ಈ ನಿರ್ಧಾರ ಮಾಡಿದ್ದೇನೆ. ಬದಲಾವಣೆಗಾಗಿ ನನಗೆ ಇನ್ನಷ್ಟು ಶಕ್ತಿಯ ಅಗತ್ಯವಿದೆ ಎಂದು ಹೇಳುವ ಮೂಲಕ ಕೇಂದ್ರದಲ್ಲಿ ನರೇಂದ್ರ ಮೋದಿ ಆಡಳಿತಕ್ಕೆ ಬಹುಪರಾಕ್‌ ಹಾಕಿದ್ದಾರೆ.

ಸುಮಾರು ಒಂದು ವರ್ಷದಿಂದ ಬಿಜೆಪಿಯವರು ನನಗೆ ಆಹ್ವಾನ ನೀಡಿದ್ದಾರೆ. ನಾನೆಂದೂ ಕುಟುಂಬ ರಾಜಕಾರಣ ಮಾಡೋದಿಲ್ಲ. ಅಭಿಷೇಕ್‌ಗೆ ನಾನು ಎಲ್ಲಿಯೂ ಟಿಕೆಟ್‌ ಕೇಳಲ್ಲ. ಇದು ಚಾಮುಂಡೇಶ್ವರಿ ತಾಯಿಯ ಮೇಲೆ ಆಣೆ. ನಾನು ರಾಜಕಾರಣದಲ್ಲಿ ಇರುವವರೆಗೂ ಅಭಿಷೇಕ್‌ ಅಂಬರೀಶ್‌ ರಾಜಕಾರಣಕ್ಕೆ ಬರೋದಿಲ್ಲ. ನನ್ನ ಮಗನ ಭವಿಷ್ಯವನ್ನು ಚಾಮುಂಡಿ ತಾಯಿಯೇ ನೋಡಿಕೊಳ್ಳುತ್ತಾಳೆ. ಚುನಾವಣೆಗೆ ನಿಲ್ಲುವಂತೆ ಅಭಿಷೇಕ್‌ಗೆ ಎರಡು ಪಕ್ಷಗಳಿಂದ ಆಹ್ವಾನ ಬಂದಿತ್ತು.

ಸದ್ಯಕ್ಕೆ ಬಿಜೆಪಿಗೆ ಬೆಂಬಲವನ್ನು ಘೋಷಣೆ ಮಾಡುತ್ತಿದ್ದೇನೆ. ಆದರೆ, ಅಧಿಕೃತವಾಗಿ ಪಕ್ಷ ಸೇರಲು ತಾಂತ್ರಿಕ ತೊಡಕುಗಳಿವೆ. ಅದೆಲ್ಲವೂ ಕ್ಲಿಯರ್‌ ಆದ ಬಳಿಕ ಪಕ್ಷವನ್ನು ಸೇರಿಕೊಳ್ಳಲಿದ್ದೇನೆ ಎಂದು ಸುಮಲತಾ ಹೇಳಿದ್ದಾರೆ. ಬಹಳ ಯೋಚನೆ ಮಾಡಿ ಈ ನಿರ್ಧಾರ ಮಾಡಿದ್ದೇನೆ. ಮೋದಿ ನಾಯಕತ್ವದಲ್ಲಿ ದೇಶ ಪ್ರಗತಿ ಕಂಡಿದೆ ಎಂದು ಹೇಳಿದರು.

ಬಿಜೆಪಿ ಸೇರಲು ಸುಮಲತಾಗೆ ಸಂವಿಧಾನದ 10ನೇ ವಿಧಿ ಅಡ್ಡಿಯಾಗಿದೆ. ಈ ತಾಂತ್ರಿಕ ಕಾರಣದಿಂದಾಗಿ ಅವರಿ ಅಧಿಕೃತವಾಗಿ ಪಕ್ಷ ಸೇರ್ಪಡೆಯಾಗಿಲ್ಲ. ಹಾಗೇನಾದರೂ ಸುಮಲತಾ ಈ ಹಂತದಲ್ಲಿ ಬೇರೆ ಪಕ್ಷಕ್ಕೆ ಸೇರಿದ್ದಾದಲ್ಲಿ ಅವರ ಸಂಸದೆ ಸ್ಥಾನ ಅನರ್ಹಗೊಳ್ಳುತ್ತದೆ. 

Leave a Reply

Your email address will not be published. Required fields are marked *