Share this news

ಹುಬ್ಬಳ್ಳಿ: ಹಿಂದೂ ಸಮಾಜವನ್ನು ಸುಮ್ಮನೆ ಕೆಣಕಿದರೆ ಮುಂದೆ ಮಸೀದಿಯಲ್ಲೂ ಗಣೇಶ ಮೂರ್ತಿ ಪ್ರತಿಷ್ಠಾಪನೆ ಮಾಡಬೇಕಾಗುತ್ತದೆ ಎಂದು ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಎಚ್ಚರಿಕೆ ನೀಡಿದ್ದಾರೆ.

ಅವರು ಹುಬ್ಬಳ್ಳಿಯ ಈದ್ಗಾ ಮೈದಾನದಲ್ಲಿ ಇರಿಸಲಾಗಿದ್ದ ಗಣೇಶ ಮೂರ್ತಿಯ ವಿಸರ್ಜನಾ ಮೆರವಣಿಗೆಯ ಪೂರ್ವದಲ್ಲಿ ಮೂರ್ತಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ,ಗಣೇಶ ಪ್ರತಿಷ್ಠಾಪನೆಯಿಂದ ಇಂದು ಈದ್ಗಾ ಮೈದಾನ ಪರಿಶುದ್ಧವಾಗಿದೆ. ಅತ್ಯಂತ ಶಾಂತ ರೀತಿಯಿಂದ 3ನೇ ದಿನ ಗಣೇಶ ಪೂಜೆಸಲ್ಲಿಸಿ, ವಿಸರ್ಜನೆ ಮಾಡಿದ್ದೇವೆ.ಮುಂದಿನ ದಿನಗಳಲ್ಲಿಯೂ ಇದೇ ಮಾದರಿಯಲ್ಲಿ ಹಿಂದೂ ಸಮಾಜದಿಂದ ಇಲ್ಲಿ ಗಣೇಶ ಹಬ್ಬವನ್ನು ಅದ್ಧೂರಿಯಾಗಿ ಆಚರಣೆ ಮಾಡಲಾಗುವುದು ಎಂದರು.ಹಿಂದೂ ಸಮಾಜ ಬಾಂಧವರೆಲ್ಲ ಸೇರಿ ಅದ್ಧೂರಿ, ಶಾಂತ ರೀತಿಯಲ್ಲಿ ಮೂರ್ತಿ ಪ್ರತಿಷ್ಠಾಪಿಸಿ ವಿಸರ್ಜಿಸಿದ್ದೇವೆ. ಶತ್ರುಗಳು, ಅಧರ್ಮಿಯರು, ದೇಶದ್ರೋಹಿಗಳು ಯಾರು ಎಂಬುದು ಈಗ ಸ್ಪಷ್ಟವಾಗಿ ಗೊತ್ತಾಗಿದೆ. ಸರ್ಕಾರ, ಪೊಲೀಸ್ ಇಲಾಖೆಗೆ ಯಾರು ಗಲಭೆಕೋರರು, ಯಾರು ಪ್ರಚೋದನೆ ಕೊಡುವವರು ಯಾರು, ಶಾಂತಿಪ್ರಿಯರು ಯಾರು ಎಂಬುದು ಗೊತ್ತಾಗಿದೆ ಎಂದರು.

ಈದ್ಗಾ ಮೈದಾನದಲ್ಲಿ ಗಣೇಶ ಉತ್ಸವಕ್ಕೆ ವಿರೋಧಿಸಿದವರಿಗೆ ತೀವ್ರವಾದ ಮುಖಭಂಗವಾಗಿದೆ. ಈ ಹಿಂದೆ ಅಂಜುಮನ್ ಇಸ್ಲಾಂ ಸಂಸ್ಥೆಯವರು ಇಲ್ಲಿ ರಾಷ್ಟ್ರ ಧ್ವಜಾರೋಹಣ ಮಾಡಲು ವಿರೋಧಿಸಿದ್ದರು. ಅವರು ದೇಶದ್ರೋಹಿಗಳು, ಇಂದು ಹಿಂದೂ ಧರ್ಮಕ್ಕೆ,ಸಂಪ್ರದಾಯಕ್ಕೆ ವಿರೋಧ ಮಾಡಲು ಕೈ ಹಾಕಿದರು. ಅದನ್ನು ಮೆಟ್ಟಿ ಗಣೇಶ ಪ್ರತಿಷ್ಠಾಪನೆ ಮಾಡಿ ತೋರಿಸಿದ್ದೇವೆ ಎಂದರು.

ನಾವೂ ಕೋರ್ಟ್‌ಗೆ ಹೋಗುವೆವು:
ನಾವು ಈ ಈದ್ಗಾ ಮೈದಾನದಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡುವಾಗ ಕೋರ್ಟ್‌ಗೆ ಹೋಗಿ ತೊಂದರೆ ಕೊಟ್ಟಿದ್ದೀರಿ. ಇದನ್ನು ನಾವು ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ನಮಗೂ ಕೋರ್ಟ್‌ಗೆ ಹೋಗುವುದು ಗೊತ್ತು. ಮುಂದೆ ನೀವು ಈ ಈದ್ಗಾದಲ್ಲಿ ಹೇಗೆ ಆಚರಿಸುತ್ತೀರಿ ನೋಡೋಣ. ಇದರ ವಿರುದ್ಧ ನಾವೂ ಕೋರ್ಟಿಗೆ ಹೋಗುತ್ತೇವೆ.ಇಲ್ಲಿ ಕಾಲಿಡಲೂ ಬಿಡುವುದಿಲ್ಲ ಎಂದ ಬಹಿರಂಗವಾಗಿ ಸವಾಲು ಹಾಕಿದರು. ಇದು ಪಾಕಿಸ್ತಾನವಲ್ಲ,ಇದು ಪಾಲಿಕೆಯ ಜಾಗ ಎಂದು ಸುಪ್ರೀಂಕೋರ್ಟ್‌ ಸ್ಪಷ್ಟವಾಗಿ ಅಂಜುಮನ್‌ ಇಸ್ಲಾಂ ಸಂಸ್ಥೆಯವರಿಗೆ ತಿಳಿಸಿದೆ ಎಂದು ಮುತಾಲಿಕ್ ಹೇಳಿದ್ದಾರೆ

 

Leave a Reply

Your email address will not be published. Required fields are marked *