Share this news

ನವದೆಹಲಿ : ಪಂಚ ರಾಜ್ಯಗಳ ಚುನಾವಣೆ ಕದನದ ನಡುವೆ, 2024ರ ಲೋಕಸಭೆ ಚುನಾವಣೆ ಮೇಲೆ ಕಣ್ಣಿಟ್ಟಿರುವ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ, ಆದಿವಾಸಿ ಸಮುದಾಯದ ಸಬಲೀಕರಣಕ್ಕೆ 24 ಸಾವಿರ ಕೋಟಿ ರೂ.ಗಳ ಬೃಹತ್ ಯೋಜನೆ ಜಾರಿಗೊಳಿಸಲು ಮುಂದಾಗಿದೆ. ಆದಿವಾಸಿ ನಾಯಕ ಬಿರ್ಸಾ ಮುಂಡಾ ಜನ್ಮ ದಿನವಾದ ನವೆಂಬರ್ 15 ರಂದು ‘ಜನಜಾತೀಯ ಗೌರವ ದಿವಸ’ದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಆದಿವಾಸಿ ಕಲ್ಯಾಣ ಯೋಜನೆಗೆ ಜಾರ್ಖಂಡ್‌ನಲ್ಲಿ ಚಾಲನೆ ನೀಡಲಿದ್ದಾರೆ ಎಂದು ಸರಕಾರದ ಉನ್ನತ ಮೂಲಗಳು ಹೇಳಿವೆ.
ಬುಡಕಟ್ಟು ಸಮುದಾಯದ ದುರ್ಬಲ ವರ್ಗಗಳ ಸರ್ವತೋಮುಖ ಅಭಿವೃದ್ಧಿ ಹಾದಿಯಲ್ಲಿ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುತ್ತಿದೆ. ಆದಿವಾಸಿ ಸಮುದಾಯದ ದುರ್ಬಲ ವರ್ಗಗಳ ಏಳಿಗೆಗಾಗಿ 2023- 24ನೇ ಸಾಲಿನ ಆಯವ್ಯಯದಲ್ಲಿ ಕೇಂದ್ರ ಸರಕಾರ ಯೋಜನೆ ಘೋಷಿಸಿತ್ತು. ವಿಶೇಷವಾಗಿ ದುರ್ಬಲ ಆದಿವಾಸಿ ಗುಂಪುಗಳ (ಪಿವಿಟಿಜಿ) ಸಮಗ್ರ ಅಭಿವೃದ್ಧಿಗಾಗಿ ಈ ಯೋಜನೆ ಜಾರಿಗೆ ತರಲಾಗುತ್ತಿದೆ.
18 ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶದ 220 ಜಿಲ್ಲೆಗಳ 22,544 ಹಳ್ಳಿಗಳಲ್ಲಿ ವಾಸವಿರುವ ಸುಮಾರು 75 ಆದಿವಾಸಿ ಸಮುದಾಯದ 28 ಲಕ್ಷ ದುರ್ಬಲ ವರ್ಗಗಳ ಜನರ ಕಲ್ಯಾಣಕ್ಕೆ ಪಿವಿಟಿಜಿ ಅಭಿವೃದ್ಧಿ ಯೋಜನೆಯಿಂದ ಪ್ರಯೋಜನವಾಗಲಿದೆ ಎಂದು ಕೇಂದ್ರ ಹೇಳಿದೆ. ಬುಡಕಟ್ಟು ಸಮುದಾಯಗಳ ಸಬಲೀಕರಣ ಪ್ರಯತ್ನದ ನಿಟ್ಟಿನಲ್ಲಿ ಇದು ಬಹು ದೊಡ್ಡ ಹೆಜ್ಜೆಯಾಗಿದೆ. ಇಂತಹ ಯೋಜನೆ ಇದೇ ಮೊದಲ ಸಲವಾಗಿದೆ ಎಂದು ಮೂಲಗಳು ತಿಳಿಸಿವೆ. ಪಿವಿಟಿಜಿ ಆದಿವಾಸಿಗಳು ವಿವಿಧ ಭಾಗಗಳಲ್ಲಿ ಹಂಚಿ ಹೋಗಿದ್ದಾರೆ. ಕುಗ್ರಾಮಗಳು ಹಾಗೂ ಮೂಲಸೌಕರ್ಯಗಳು ಕಲ್ಪಿಸಲಾಗದಂತಹ ಸ್ಥಳಗಳಲ್ಲಿ ವಾಸವಾಗಿದ್ದಾರೆ. ಹೆಚ್ಚಿನವರು ಅರಣ್ಯ ಪ್ರದೇಶಗಳಲ್ಲಿದ್ದಾರೆ. ಹೀಗಾಗಿ ಪಿವಿಟಿಜಿ ಕುಟುಂಬಗಳನ್ನು ಮತ್ತು ವಾಸಸ್ಥಳಗಳನ್ನು ರಸ್ತೆ ಹಾಗೂ ದೂರಸಂಪರ್ಕ, ವಿದ್ಯುತ್, ಸುರಕ್ಷಿತ ವಸತಿ, ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ, ಶಿಕ್ಷಣ ಪಡೆಯಲು ಸುಧಾರಿತ ಅವಕಾಶ, ಆರೋಗ್ಯ ಹಾಗೂ ಪೌಷ್ಟಿಕತೆ ಮತ್ತು ಸುಸ್ಥಿರ ಜೀವನೋಪಾಯ ಅವಕಾಶಗಳಂತಹ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಮೂಲಕ ಆದಿವಾಸಿಗಳ ಜೀವನ ಸುಧಾರಣೆ ಮಾಡುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಕೇಂದ್ರ ಸರಕಾರದ 9 ಸಚಿವಾಲಯಗಳ 11 ಇಲಾಖೆಗಳ ಸಹಯೋಗದ ಅಡಿಯಲ್ಲಿ ಆದಿವಾಸಿ ಸಬಲೀಕರಣ ಕಾರ್ಯಕ್ರಮ ಅನುಷ್ಠಾನಕ್ಕೆ ಯೋಜನೆ ರೂಪಿಸಲಾಗಿದೆ. ಗ್ರಾಮೀಣ ರಸ್ತೆ, ಗ್ರಾಮೀಣ ಕುಡಿಯುವ ನೀರು, ಗ್ರಾಮೀಣ ವಸತಿಗಳನ್ನು ಒಳಗೊಂಡ ಕಲ್ಯಾಣ ಕಾರ್ಯಕ್ರಮಗಳನ್ನು ನಡೆಸಲಾಗುತ್ತದೆ. ಜನವಸತಿ ಪ್ರದೇಶಗಳಿಗೆ ಸವಲತ್ತುಗಳನ್ನು ತಲುಪಿಸಲು ಅಡ್ಡಿಯಾಗಿರುವ ಕೆಲವು ನಿಯಮಗಳನ್ನು ಸಡಿಲಿಸಲಾಗುತ್ತದೆ ಎಂದು ಸರ್ಕಾರದ ಮೂಲಗಳು ತಿಳಿಸಿವೆ.

 

 

Leave a Reply

Your email address will not be published. Required fields are marked *