ಹರಾರೆ(ಆ.23): ಜಿಂಬಾಬ್ವೆ ಕ್ರಿಕೆಟ್ ದಂತಕಥೆ ಹೀಥ್ ಸ್ಟ್ರೀಕ್ ಕೊನೆಯುಸಿರೆಳೆದಿದ್ಧಾರೆ ಎನ್ನುವ ಸುದ್ದಿ ಕ್ರಿಕೆಟ್ ಜಗತ್ತಿನಲ್ಲಿ ಸಂಚಲನ ಮೂಡಿಸಿತ್ತು. ಸಹ ಆಟಗಾರ ಹೆನ್ರಿ ಒಲಂಗಾ ಮಾಡಿದ ಒಂದು ಟ್ವೀಟ್, ಸಾವಿನ ಗಾಳಿಸುದ್ದಿಗೆ ಇಡೀ ಕ್ರಿಕೆಟ್ ಜಗತ್ತೇ ಕಂಬನಿ ಮಿಡಿದಿತ್ತು. ಇದೀಗ ಆ ಸುದ್ದಿಗೆ ಮತ್ತೊಂದು ಟ್ವಿಸ್ಟ್ ಸಿಕ್ಕಿದ್ದು, ಸ್ವತಃ ಹೀಥ್ ಸ್ಟ್ರೀಕ್, ತಮ್ಮ ಸಾವಿನ ಸುದ್ದಿ ತಿಳಿದು, ನಾನಿನ್ನೂ ರನೌಟ್ ಆಗಿಲ್ಲ, ಜೀವಂತವಾಗಿದ್ದೇನೆ ಎಂದು ಖಚಿತಪಡಿಸಿದ್ದಾರೆ.
ಈ ಬಗ್ಗೆ ಮಾಹಿತಿ ನೀಡಿರುವ ಹೀತ್ ಸ್ಟ್ರೀಕ್, ನಾನು ಇನ್ನು ಜೀವಂತವಾಗಿದ್ದೇನೆ ಮತ್ತು ಆರೋಗ್ಯವಾಗಿದ್ದೇನೆ ಎಂದು ಹೀತ್ ಸ್ಟ್ರೀಕ್ ಹೇಳಿದ್ದಾರೆ. ಪ್ರಸ್ತುತ ಹೀತ್ ಸ್ಟ್ರೀಕ್ ಕ್ಯಾನ್ಸರ್‌ನಿಂದ ಬಳಲುತ್ತಿದ್ದು, ಅವರಿಗೆ ಚಿಕಿತ್ಸೆ ಮುಂದುವರೆದಿದ. ಮಂಗಳವಾರ ತಡರಾತ್ರಿ, ಅವರ ಸಹ ಆಟಗಾರ ಹೆನ್ರಿ ಒಲಂಗಾ ಅವರು, ಸ್ಟ್ರೀಕ್ ನಿಧನರಾಗಿದ್ದಾರೆ ಎಂದು ಟ್ವೀಟ್ ಮಾಡುವ ಮೂಲಕ ಮಾಹಿತಿ ನೀಡಿದ್ದರು. ಆ ಬಳಿಕ ಸ್ಟ್ರೀಕ್ ನಿಧನದ ಸುದ್ದಿ ಎಲ್ಲೆಡೆ ಹಬ್ಬಿತ್ತು.
ಹೆನ್ರಿ ಒಲಂಗಾ ಅವರು ಇದೀಗ ತಾವು ಮೊದಲು ಮಾಡಿದ್ದ ಟ್ವೀಟ್ ಅನ್ನು ಡಿಲೀಟ್ ಮಾಡಿದ್ದು, ಹೊಸ ಟ್ವೀಟ್ನಲ್ಲಿ ಸ್ಟ್ರೀಕ್ ಅವರೊಂದಿಗಿನ ಸಂಭಾಷಣೆಯ ಸಂದೇಶವನ್ನು ಟ್ವೀಟ್ ಮಾಡಿದ್ದಾರೆ.
ಅಲ್ಲದೆ ಈ ರೀತಿ ತಪ್ಪು ಮಾಹಿತಿ ನೀಡಿದಕ್ಕಾಗಿ ಹೀತ್ ಸ್ಟ್ರೀಕ್ ಅಸಮಾಧಾನ ವ್ಯಕ್ತಪಡಿಸಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಇಂತಹ ಸುಳ್ಳು ಸುದ್ದಿ ಹಬ್ಬಿಸುತ್ತಿರುವುದಕ್ಕೆ ತೀವ್ರ ಬೇಸರವಾಗಿದೆ. ಈ ವದಂತಿ ಹಬ್ಬಿಸಿದವರು ಕ್ಷಮೆ ಯಾಚಿಸಬೇಕು ಎಂದು ಹೇಳಿದ್ದಾರೆ.