ಬೆಂಗಳೂರು : ಶಾಸಕ ಸಿಟಿ ರವಿ ಅವರು ಮಾಂಸ ತಿಂದು ದೇವಸ್ಥಾನಕ್ಕೆ ಭೇಟಿ ನೀಡಿದ್ದ ಫೋಟೋ ವೈರಲ್ ಆಗಿದ್ದು, ಈ ಬಗ್ಗೆ ಚರ್ಚೆಗಳಾಗುತ್ತಿದೆ.
ಇದೀಗ ಈ ಕುರಿತು ಬಿಜೆಪಿ ನಾಯಕ ಸಿ.ಟಿ.ರವಿ ಪ್ರತಿಕ್ರಿಯೆ ನೀಡಿದ್ದು, ನಾನು ನಾನ್ವೆಜ್ ತಿಂದಿದ್ದು ನಿಜ. ಆದರೆ ದೇವಸ್ಥಾನದ ಗರ್ಭ ಗುಡಿಗೆ ಹೋಗಲಿಲ್ಲ. ದೇವಸ್ಥಾನದ ಪ್ಯಾಸೇಜ್ ಬಳಿ ಮಾತ್ರ ಹೋಗಿದ್ದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಮಂಡ್ಯದಲ್ಲಿ ನಿನ್ನೆ ಸುದ್ದಿಗಾರರ ಜೊತೆ ಮಾತನಾಡಿದ್ದ ಸಿಟಿ ರವಿ, ನಾನು ಮಾಂಸ ತಿನ್ನುವ ಜಾತಿಯಲ್ಲಿ ಹುಟ್ಟಿದ್ದೀನಿ, ಆದರೆ ಮಾಂಸ ತಿಂದು ದೇವಸ್ಥಾನಕ್ಕೆ ಹೋಗಿಲ್ಲ. ಉತ್ತರ ಕನ್ನಡ ಜಿಲ್ಲೆಯಲ್ಲಿರುವ ಬಟ್ಕಳದಲ್ಲಿರುವ ಹನುಮನ ದೇವಸ್ಥಾನವಾಗಿತ್ತು, ಅಂದು ಬಾಗಿಲು ಹಾಕಿದ್ದರಿಂದ ದೂರದಿಂದಲೇ ಕೈ ಮುಗಿದಿದ್ದೆನು, ದೇವರ ಬಗ್ಗೆ ನನಗೆ ಶ್ರದ್ದೆ ಇದೆ. ನಾನು ಸಿದ್ದರಾಮಯ್ಯ ಥರ ಅಲ್ಲ, ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಹೋಗುತ್ತೇನೆ ಅಂತ ಹೇಳುವ ದಾರ್ಷ್ಟ್ಯತೆ ನನ್ನಲ್ಲಿಲ್ಲ ಎಂದರು.
ಫೆ.19ರAದು ಸಿ.ಟಿ.ರವಿ ಉತ್ತರಕನ್ನಡ ಜಿಲ್ಲೆಗೆ ಆಗಮಿಸಿದ್ದ ಸಂದರ್ಭ ಶಾಸಕ ಸುನಿಲ್ ನಾಯ್ಕ ಮನೆಯಲ್ಲಿ ಸಿ.ಟಿ.ರವಿ ಬಾಡೂಟ ಸೇವಿಸಿದ್ದ ಬಳಿಕ ಅವರು ಹಳೇ ಬಸ್ ನಿಲ್ದಾಣ ಸಮೀಪವಿರುವ ನಾಗಬನ ಹಾಗೂ ಕರಿಬಂಟ ಹನುಮ ದೇವಸ್ಥಾನಕ್ಕೆ ಭೇಟಿ ನೀಡಿದ್ದರು. ದೇವಸ್ಥಾನದ ಬಾಗಿಲಲ್ಲೇ ಸನ್ಮಾನವನ್ನೂ ಸ್ವೀಕರಿಸಿದ್ದರು. ಸಿ.ಟಿ,ರವಿ ಬಾಡೂಟ ಸೇವಿಸುತ್ತಿರುವ ಹಾಗೂ ದೇವಸ್ಥಾನಕ್ಕೆ ಭೇಟಿ ನೀಡುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು.