ಲಕ್ನೋ: ಉತ್ತರಪ್ರದೇಶದ ಲಕ್ನೋದಲ್ಲಿ ನಾಲ್ಕು ಅಂತಸ್ತಿನ ಕಟ್ಟಡವೊಂದು ದಿಢೀರ್ ಕುಸಿದು ಬಿದ್ದ ಪರಿಣಾಮ ಮೂವರು ಸಾವಿಗೀಡಾಗಿದ್ದು, ಹಲವರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಲಕ್ನೋದ ವಜೀರ್ ಹಜ್ರತ್‌ಗಂಜ್ ಎಂಬಲ್ಲಿ ಈ ಘಟನೆ ನಡೆದಿದ್ದು, ಜನವಸತಿ ಇದ್ದ ನಾಲ್ಕು ಅಂತಸ್ತಿನ ಕಟ್ಟಡ ದಿಢೀರ್ ಕುಸಿದಿದೆ. ಇಂದು ಮಧ್ಯಾಹ್ನದ ವೇಳೆ ಉತ್ತರ ಭಾರತದಲ್ಲಿ ಭೂಮಿ ಕಂಪಿಸಿದ ಅನುಭವ ಆಗಿತ್ತು. ಇದರ ಬೆನ್ನಲೇ ಈಗ ಕಟ್ಟಡ ಕುಸಿದಿದ್ದು, ಕಟ್ಟಡದ ಅವಶೇಷಗಳಡಿಯಿಂದ ಮೂರು ಶವಗಳನ್ನು ಹೊರತೆಗೆಯಲಾಗಿದೆ. ಇನ್ನು ಅನೇಕರು ಅವಶೇಷಗಳಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ.
ಇದುವರೆಗೆ ಕಟ್ಟಡದಡಿಯಿಂದ ಮೂರು ಶವಗಳನ್ನು ಹೊರ ತೆಗೆಯಲಾಗಿದೆ. ಮೃತದೇಹಗಳನ್ನು ಆಸ್ಪತ್ರೆಗೆ ಕಳುಹಿಸಲಾಗಿದೆ. ವಿಪತ್ತು ನಿರ್ವಹಣಾ ತಂಡ, ಅಗ್ನಿ ಶಾಮಕ ತಂಡ ಸ್ಥಳದಲ್ಲಿ ಹಾಜರಿದ್ದು ರಕ್ಷಣಾ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಉತ್ತರಪ್ರದೇಶ ಉಪ ಮುಖ್ಯಮಂತ್ರಿ ಬ್ರಿಜೇಶ್ ಪಾಟಕ್ ಹೇಳಿದ್ದಾರೆ.
ಕಟ್ಟಡ ಕುಸಿತಕ್ಕೆ ಕಾರಣವಾಗಿರುವ ಹಜ್ರತ್ ಗಂಜ್ ಹಳೆ ಕಟ್ಟಡಗಳ ಕಾರಣಕ್ಕೆ ಈಗಾಗಲೇ ಸುದ್ದಿಯಲ್ಲಿತ್ತು. ಈ ಮಧ್ಯೆ ಈಗ ಕಟ್ಟಡ ಕುಸಿದು ಹಲವರ ಸಾವಿಗೆ ಕಾರಣವಾಗಿದೆ.