ನವದೆಹಲಿ:ಸಂಸತ್ತಿನ ಈ ಅವಧಿಯ ಕೊನೆಯ ಚಳಿಗಾಲದ ಅಧಿವೇಶನವು ಡಿ.4 ರಂದು ಆರಂಭವಾಗಲಿದ್ದು ಡಿ.22ರವರೆಗೆ ಈ ಅಧಿವೇಶನ ನಡೆಯಲಿದ್ದು, 15 ದಿನದ ಕಲಾಪದಲ್ಲಿ ಆಡಳಿತ ಹಾಗೂ ವಿಪಕ್ಷಗಳ ನಡುವೆ ಜಿದ್ದಾಜಿದ್ದಿಗೆ ವೇದಿಕೆ ಸೃಷ್ಟಿಯಾಗಿದೆ.
ಈ ಅಧಿವೇಶನದಲ್ಲಿ ಆಡಳಿತಾರೂಢ ಎನ್ಡಿಎ ಮೈತ್ರಿಕೂಟ ಮತ್ತು ವಿಪಕ್ಷಗಳ ಇಂಡಿಯಾ ಮೈತ್ರಿಕೂಟದ ನಡುವಣ ವಾಕ್ಸಮರಕ್ಕೆ ಕಾರಣವಾಗಲಿದೆ ಎಂದು ವಿಶ್ಲೇಷಿಸಲಾಗಿದೆ.
ಈ ಅವಧಿಯಲ್ಲಿ 19 ಮಸೂದೆಗಳು ಹಾಗೂ 2 ಹಣಕಾಸು ವಿಷಯಗಳನ್ನು ಮಂಡಿಸಲು ಸರ್ಕಾರ ನಿರ್ಧರಿಸಿದೆ. ಅಧಿವೇಶನದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಶನಿವಾರ ವಿಪಕ್ಷಗಳ ನಾಯಕರ ಸಭೆ ಕರೆದಿತ್ತು. ಸಂಸದೀಯ ಸಚಿವ ಪ್ರಹ್ಲಾದ ಜೋಶಿ ಕರೆದಿದ್ದ ಸಭೆಯಲ್ಲಿ ಕೇಂದ್ರ ಸಚಿವರಾದ ರಾಜನಾಥ ಸಿಂಗ್, ಪೀಯೂಶ್ ಗೋಯಲ್, ಅನೇಕ ವಿಪಕ್ಷ ನಾಯಕರು ಪಾಲ್ಗೊಂಡಿದ್ದರು. ಈ ವೇಳೆ ವಿಪಕ್ಷ ನಾಯಕರು ಮಾತನಾಡಿ, ಬೆಲೆ ಏರಿಕೆ, ಮಣಿಪುರ ಸಮಸ್ಯೆ, ಕೇಂದ್ರವು ಹಳೆಯ 3 ಅಪರಾಧ ಮಸೂದೆಗಳನ್ನು ರದ್ದುಗೊಳಿಸಿ ಅದರ ಬದಲಿಗೆ 3 ಹೊಸ ಮಸೂದೆಗಳನ್ನು ಮಂಡಿಸಲು ಮುಂದಾಗಿರುವುದು ಹಾಗೂ ಸಂಸದೆ ಮಹುವಾ ಮೊಯಿತ್ರಾ ಅವರನ್ನು ಪ್ರಶ್ನೆಗಾಗಿ ಲಂಚ ಹಗರಣದ ಕಾರಣ ವಜಾ ಮಾಡಲು ಸಂಸದೀಯ ಸಮಿತಿ ಶಿಫಾರಸು ಮಾಡಿರುವುದು, ಈ ಎಲ್ಲಾ ವಿಷಯಗಳ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಸಚಿವ ಜೋಶಿ, ವಿಪಕ್ಷಗಳ ಆಗ್ರಹವನ್ನು ಸರ್ಕಾರ ಸಕಾರಾತ್ಮಕವಾಗಿ ತೆಗೆದುಕೊಂಡಿದೆ. ಎಲ್ಲಾ ವಿಷಯಗಳ ಚರ್ಚೆಗೆ ಸರ್ಕಾರ ಸಿದ್ಧವಿದೆ. ಇದಕ್ಕೆ ಸೂಕ್ತ ವಾತಾರವಣ ನಿರ್ಮಿಸಿಕೊಡುವ ಹೊಣೆ ವಿಪಕ್ಷಗಳದ್ದಾಗಿದೆ ಎಂದಿದ್ದಾರೆ