ಬೆಂಗಳೂರು : 2023-24 ನೇ ಸಾಲಿನ ಶೈಕ್ಷಣಿಕ ಮಾರ್ಗಸೂಚಿಯಂತೆ ಮೇ. 31 ರ ನಾಳೆಯಿಂದ ರಾಜ್ಯಾದ್ಯಂತ ಎಲ್ಲ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳು ಪುನಾರಂಭಗೊಳ್ಳಲಿವೆ. ಇದಕ್ಕೆ ಪೂರಕವಾಗಿ ಮೇ. 29 ಮತ್ತು 30 ರಂದು ಶಾಲೆಗಳನ್ನು ಸಂಪೂರ್ಣ ಸ್ವಚ್ಛಗೊಳಿಸಿ, ಸುರಕ್ಷತಾ ಕ್ರಮಗಳನ್ನು ಪರಿಶೀಲಿಸಿ,, ಸರಿಪಡಿಸಿ ಪ್ರಾರಂಭೋತ್ಸವಕ್ಕೆ ಅಗತ್ಯ ಸಿದ್ದತೆಗಳನ್ನು ಮಾಡಿಕೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
2023-24ನೇ ಸಾಲಿನಲ್ಲಿ ಶಾಲೆಗಳನ್ನು ಆರಂಭಿಸಲು ಶಾಲಾ ಶಿಕ್ಷಣ ಇಲಾಖೆಯು ಮೇ31ರ ದಿನಾಂಕವನ್ನು ನಿಗದಿ ಪಡಿಸಿದೆ. ಅದರಂತೆ ಶಾಲೆಗಳ ಆರಂಭಕ್ಕೆ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ತಳಿರು-ತೋರಣಗಳಿಂದ ಶಾಲೆಗಳನ್ನು ಸಿಂಗಾರಗೊಳಿಸಲಾಗಿದ್ದು, ಮಕ್ಕಳಿಗೆ ಸಿಹಿ ಹಂಚಿ ಆದರದಿಂದ ಬರ ಮಾಡಿಕೊಳ್ಳಲು ಶಿಕ್ಷಕರು ಸಿದ್ಧರಾಗಿದ್ದಾರೆ.
ಇದೇ ಮೊದಲ ಬಾರಿಗೆ ಶಾಲಾ ಶಿಕ್ಷಣ ಇಲಾಖೆಯಿಂದ ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಒಂದು ಜತೆ ಸಮವಸ್ತ್ರ ಮತ್ತು ಶಾಲೆ ಆರಂಭಕ್ಕೂ ಮುನ್ನವೇ ಶೇ.98ರಷ್ಟು ಪಠ್ಯಪುಸ್ತಕಗಳನ್ನು ವಿತರಿಸಿ ದಾಖಲೆ ನಿರ್ಮಿಸಿದೆ.
ಕಳೆದ ವರ್ಷ ವಿದ್ಯಾರ್ಥಿಗಳಿಗೆ ಸಮವಸ್ತ್ರ ಸೇರಿದಂತೆ ಪಠ್ಯಪುಸ್ತಕ ಕೂಡ ಸರಿಯಾದ ಸಮಯಕ್ಕೆ ಹಂಚಿಕೆ ಮಾಡಲಾಗಿರಲಿಲ್ಲ. ಆಗಸ್ಟ್ ತಿಂಗಳಾಂತ್ಯದವರೆಗೂ ಕಾಯಬೇಕಾಗಿತ್ತು. ಆದ್ರೇ ಈ ಬಾರಿ ಮಾತ್ರ ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಎನ್ನುವಂತೆ ಶಾಲೆಗಳ ಆರಂಭಕ್ಕೆ ಮುನ್ನವೇ ಸಮವಸ್ತ್ರ, ಪಠ್ಯಪುಸ್ತಕಗಳನ್ನು ವಿತರಿಸಿದೆ.