ಬೆಂಗಳೂರು : ಸರ್ಕಾರ ಹೆಚ್ಚಳ ಮಾಡಿರುವ ಗೌರವಧನ ಪಾವತಿಸಬೇಕು, ಹೊಸ ಮೊಬೈಲ್ ನೀಡಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ಅಂಗನವಾಡಿ ಕಾರ್ಯಕರ್ತೆಯರ ಮತ್ತು ಸಹಾಯಕಿಯರ ಸಂಯುಕ್ತ ಸಂಘರ್ಷ ಸಮಿತಿಯು (ನಾಳೆ) ಜು.10 ರಂದು ರಾಜ್ಯದ ಎಲ್ಲಾ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲು ನಿರ್ಧರಿಸಿದೆ ಎಂದು ಸಿಐಟಿಯು ರಾಜ್ಯ ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ವರಲಕ್ಷಿ ತಿಳಿಸಿದ್ದಾರೆ.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಿಂದಿನ ಬಿಜೆಪಿ ಸರ್ಕಾರ ಅಂಗನವಾಡಿ, ಬಿಸಿಯೂಟ, ಆಶಾ ನೌಕರರಿಗೆ ಮಾಸಿಕವಾಗಿ ಸಾವಿರ ರು. ಗೌರವ ಧನ ಹೆಚ್ಚಳ ಮಾಡುವುದಾಗಿ ಘೋಷಿಸಿತ್ತು. ಆದರೆ ಅನುದಾನವನ್ನು ಮೀಸಲಿಡಲಿಲ್ಲ, ಆದೇಶವನ್ನೂ ಹೊರಡಿಸಲಿಲ್ಲ. ಆದ್ದರಿಂದ ನೂತನ ಸರ್ಕಾರ ಈ ಹಣ ಪಾವತಿಸಬೇಕು ಎಂದು ಆಗ್ರಹಿಸಿ ಸೋಮವಾರ ತಾಲೂಕು ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದರು.
ಪೋಷಣ್ ಅಭಿಯಾನದಡಿ ಅಂಗನವಾಡಿ ಕೇಂದ್ರಗಳಿಗೆ ಮೊಬೈಲ್ ನೀಡಿ 4 ವರ್ಷವಾಗಿದ್ದು ಇವುಗಳು ತುಂಬಾ ಹಳೆಯದಾಗಿದ್ದು ಕಾರ್ಯನಿರ್ವಹಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಹೊಸ ಮೊಬೈಲ್ ನೀಡಬೇಕು ಎಂದು ಆಗ್ರಹಿಸಿ ಅಂಗನವಾಡಿ ನೌಕರರ ಎಲ್ಲಾ ಸಂಘಟನೆಗಳು ಸಂಯುಕ್ತವಾಗಿ ಜು.10 ರಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಕಚೇರಿಗಳ ಮುಂದೆ ರಾಜ್ಯಾದ್ಯಂತ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದರು.
ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತೆಯರ ಸಂಘದ ಜಿಲ್ಲಾ ಉಸ್ತುವಾರಿ ಪಿ.ಎಸ್. ಸಂಧ್ಯಾ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೊಸ ಸರ್ಕಾರದ ಪ್ರಥಮ ಬಜೆಟ್‌ನಲ್ಲಿ ತಮ್ಮ ಪಕ್ಷದ ಪ್ರಣಾಳಿಕೆಯಲ್ಲಿ ಪ್ರಕಟಿಸಿದಂತೆ ಪ್ರಥಮ ಭರವಸೆಯನ್ನು ಆಶಾ ಕಾರ್ಯಕರ್ತೆಯರಿಗೆ ಗೌರವಧನ ಹೆಚ್ಚಳ ಕುರಿತಂತೆ ಈಡೇರಿಸುವರೆಂಬ ನಿರೀಕ್ಷೆಯಲ್ಲಿ ಇದ್ದರು, ಆದರೆ ಅದು ಹುಸಿಯಾಗಿದೆ ಎಂದು ಬೇಸರ ವ್ಯಕ್ತಪಡಿಸಿದರು.