Share this news

ಬೆಂಗಳೂರು: ರಾಜ್ಯದಲ್ಲಿನ ತೀವ್ರ ಬರ ಪರಿಸ್ಥಿತಿಯ ಕುರಿತು ಮನದಟ್ಟು ಮಾಡಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆ ಸೇರಿದಂತೆ ಹಲವು ವಿಷಯಗಳ ಕುರಿತು ಸಿಎಂ ಸಿದ್ದರಾಮಯ್ಯ ನಾಳೆ (ಡಿ. 19ರಂದು) ಪ್ರಧಾನಿ ನರೇಂದ್ರ ಮೋದಿ ಅವರನ್ನು ದೆಹಲಿಯಲ್ಲಿ ಭೇಟಿ ಮಾಡಲಿದ್ದಾರೆ.
ಬೆಳಿಗ್ಗೆ 11.30ಕ್ಕೆ ಭೇಟಿಗೆ ಪ್ರಧಾನಿ ಸಚಿವಾಲಯದಿಂದ ಸಮಯ ನಿಗದಿಯಾಗಿದೆ ಎಂದು ತಿಳಿದುಬಂದಿದೆ.ಈ ಭೇಟಿಯ ಸಂದರ್ಭದಲ್ಲಿ ಪ್ರಧಾನಿ ಜೊತೆ ರಾಜ್ಯದಲ್ಲಿನ ಬರ ಪರಿಸ್ಥಿತಿ, ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಿಂದ ಪರಿಹಾರ ಬಿಡುಗಡೆ, ನರೇಗಾ ಯೋಜನೆಯಡಿ ಮಾನವ ದಿನಗಳನ್ನು ಹೆಚ್ಚಿಸಬೇಕೆಂಬ ಬೇಡಿಕೆಯೂ ಸೇರಿದಂತೆ ಅಭಿವೃದ್ಧಿ ವಿಚಾರಗಳನ್ನು ಸಿದ್ದರಾಮಯ್ಯ ಪ್ರಸ್ತಾಪಿಸಲಿದ್ದಾರೆ ಎಂದು ಮುಖ್ಯಮಂತ್ರಿ ಕಚೇರಿ ಮೂಲಗಳು ತಿಳಿಸಿವೆ.

ಬಳಿಕ ಡಿ. 21ರಂದು ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆ ನಡೆಯಲಿದೆ. ಈ ಸಭೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಭಾಗವಹಿಸಲಿದ್ದಾರೆ.ದೆಹಲಿಯಲ್ಲಿ ವಾಸ್ತವ್ಯ ಹೂಡಲಿರುವ ಇಬ್ಬರು ನಾಯಕರು, ಮುಂಬರುವ ಲೋಕಸಭೆ ಚುನಾವಣೆಗೆ ಕಾರ್ಯತಂತ್ರ ರೂಪಿಸಲು ಮತ್ತು ನಿಗಮ– ಮಂಡಳಿಯ ನೇಮಕದ ಪಟ್ಟಿ ಅಂತಿಮಗೊಳಿಸುವ ಕುರಿತು ಹೈಕಮಾಂಡ್‌ ನಾಯಕರ ಜೊತೆ ಚರ್ಚೆ ನಡೆಸಲಿದ್ದಾರೆ.

ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್‌ ಸಿಂಗ್‌ ಸುರ್ಜೇವಾಲ ಜೊತೆ ಚರ್ಚಿಸಿ, ನಿಗಮ– ಮಂಡಳಿಗಳಿಗೆ ನೇಮಕ ಪಟ್ಟಿಗೆ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಈಗಾಗಲೇ ಅಂತಿಮ ರೂಪ ನೀಡಿದ್ದಾರೆ. ಈ ಪಟ್ಟಿಗೆ ಪಕ್ಷದ ವರಿಷ್ಠರ ಮುದ್ರೆ ಬೀಳಬೇಕಿದೆ.

ಲೋಕಸಭೆ ಚುನಾವಣೆಗೆ ಪಕ್ಷದ ಸಂಭವನೀಯ ಅಭ್ಯರ್ಥಿಗಳ ಆಯ್ಕೆಗೆ ರಚಿಸಿದ ಸಚಿವರ ನೇತೃತ್ವದ ತಂಡ ಕೆಲವು ಕ್ಷೇತ್ರಗಳ ಪಟ್ಟಿಯನ್ನು ನೀಡಿದೆ. ಇನ್ನೂ ಕೆಲವರು ಪಟ್ಟಿ ನೀಡಬೇಕಿದೆ. ಈ ಬಗ್ಗೆಯೂ ಇಬ್ಬರು ನಾಯಕರು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್‌, ರಣದೀಪ್‌ ಸಿಂಗ್‌ ಸುರ್ಜೇವಾಲಾ ಜೊತೆ ಚರ್ಚೆ ನಡೆಸಲಿದ್ದಾರೆ ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *