ಬೆಂಗಳೂರು : ಕಳೆದ 7 ತಿಂಗಳಿನಿಂದ ಬಾಕಿ ಉಳಿದಿರುವ ನಿಗಮ ಮಂಡಳಿ ನೇಮಕಾತಿಗೆ ಕೊನೆಗೂ ಮುಹೂರ್ತ ಕೂಡಿಬಂದಿದ್ದು, ನಾಳೆಯೊಳಗೆ (ಡಿ.2) ಅಂತಿಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.
ಕಳೆದ ಬಾರಿ ಲಿಸ್ಟ್ ರೆಡಿ ಮಾಡಿ ಹೋಗಿದ್ದ ಕರ್ನಾಟಕ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಕಳೆದ 2 ದಿನಗಳ ಹಿಂದೆ ಮತ್ತೆ ಬೆಂಗಳೂರಿಗೆ ಆಗಮಿಸಿ ಸಿಎಂ ಸಿದ್ದರಾಮಯ್ಯ ಜೊತೆ ನಿಗಮ ಮಂಡಳಿ ನೇಮಕಾತಿ ಫೈನಲ್ ಪಟ್ಟಿ ಸಿದ್ದಪಡಿಸಿ ಕಳುಹಿಸಿದ್ದು, ಈ ಹಿನ್ನೆಲೆಯಲ್ಲಿ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನ ಯಾರಿಗೆ ಸಿಗಲಿದೆ ಎನ್ನುವ ಕುತೂಹಲ ಮೂಡಿಸಿದೆ.
ಕೆಲವು ಮೂಲಗಳ ಮಾಹಿತಿಯ ಪ್ರಕಾರ, 25 ಶಾಸಕರಿಗೆ ನಿಗಮ ಮಂಡಳಿಯಲ್ಲಿ ಅವಕಾಶ ನೀಡುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ವಿಧಾನ ಪರಿಷತ್ ನ ನಾಲ್ಕು ಅಥವಾ ಐದು ಸದಸ್ಯರಿಗೆ ಅವಕಾಶ ಸಿಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.5 ರಿಂದ 8 ಶಾಸಕರನ್ನು ರಾಜಕೀಯ ಕಾರ್ಯದರ್ಶಿಯಾಗಿ ನೇಮಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.ಕಳೆದ ವಾರವಷ್ಟೇ ರಾಜ್ಯಕ್ಕೆ ಬಂದು ಹೋಗಿರುವ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸುರ್ಜೆವಾಲಾ ಅವರು, ಸಿಎಂ ಸಿದ್ದರಾಮಯ್ಯ,ಡಿಸಿಎಂ ಡಿಕೆ ಶಿವಕುಮಾರ್, ಪರಮೇಶ್ವರ್ ಹಾಗೂ ಬಸವರಾಜ ರಾಯರೆಡ್ಡಿ ಜತೆ ಸುದೀರ್ಘವಾಗಿ ಚರ್ಚಿಸಿದ್ದರು. ಈ ಸಭೆಯಲ್ಲಿ ಬಸವ ರಾಯರೆಡ್ಡಿ ನಿಗಮ ಮಂಡಳಿಯನ್ನು ನಿರಾಕರಿಸಿದ್ದು, ಸಚಿವ ಸ್ಥಾನ ಬೇಕು ಎನ್ನುವ ಬೇಡಿಕೆ ಇಟ್ಟಿದ್ದರು.
ನಿಗಮ ಮಂಡಳಿ ಸ್ಥಾನಕ್ಕೆ ಸಂಭಾವ್ಯರ ಪಟ್ಟಿ ಹೀಗಿದೆ
ಎಂ ನರೇಂದ್ರ ಸ್ವಾಮಿ, ರಮೇಶ್ ಬಾಬು ಬಂಡಿಸಿದ್ದೇಗೌಡ, ಅನಿಲ್ ಚಿಕ್ಕಮಾದು, ಟಿ.ಡಿ ರಾಜೇಗೌಡ, ಶಿವಲಿಂಗೇಗೌಡ, ಬಿ.ಕೆ ಸಂಗಮೇಶ್, ಬಂಗಾರಪೇಟೆ ನಾರಾಯಣಸ್ವಾಮಿ, ಕೆ.ವೈ ನಂಜೇಗೌಡ, ಬಿ.ಆರ್ ಪಾಟೀಲ್, ಗಣೇಶ್ ಹುಕ್ಕೇರಿ, ಮಹಾಂತೇಶ್ ಕೌಜಲಗಿ, ಯಶವಂತ್ ರಾಯ್ ಗೌಡ ಪಾಟೀಲ್, ಬಿ.ಜಿ ಗೋವಿಂದಪ್ಪ. ರಾಘವೇಂದ್ರ ಹಿಟ್ನಾಳ್, ರಘುಮೂರ್ತಿ, ಭೀಮಣ್ಣ ನಾಯ್ಕ್, ಸತೀಶ್ ಸೈಲ್, ಪ್ರಸಾದ್ ಅಬ್ಬಯ್ಯ, ಜಿ.ಟಿ ಪಾಟೀಲ್ , ಡಿ.ಆರ್ ಪಾಟೀಲ್, ಬಸನಗೌಡ ತುರುವಿಹಾಳ್ ಗೆ ನಿಗಮ ಮಂಡಳಿಯ ಅಧ್ಯಕ್ಷಗಿರಿ ಸಿಗುವ ಸಾಧ್ಯತೆಯಿದೆ.
ಆದರೆ ಕಾಂಗ್ರೆಸ್ ಹೈಕಮಾಂಡ್ ಅಂತಿಮ ಪಟ್ಟಿ ಇನ್ನೂ ಬಿಡುಗಡೆಯಾಗದ ಕಾರಣದಿಂದ ಈ ಪಟ್ಟಿಯಲ್ಲಿ ಒಂದಷ್ಟು ವ್ಯತ್ಯಾಸಗಳು ಆದರೂ ಅಚ್ಚರಿಯಿಲ್ಲ ಎನ್ನಲಾಗುತ್ತಿದೆ.