ನವದೆಹಲಿ:ನಿಷೇಧಿತ ಭಯೋತ್ಪಾದಕ ಸಂಘಟನೆಯಾದ ಐಎಸ್ ಐ ಜತೆ ನಿಕಟ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಲಿಘಡ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿ ಫೈಜಾನ್ ಅನ್ಸಾರಿ ಅಲಿಯಾಸ್ ಫೈಜ್ (19) ಎಂಬಾತನನ್ನು ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳು ಶುಕ್ರವಾರ ಬಂಧಿಸಿದ್ದಾರೆ.
ಅನ್ಸಾರಿ ಕುರಿತು ಮೊದಲೇ ಕಣ್ಣಿಟ್ಟಿದ್ದ ಎನ್ಐಎ ಆತನ ಮನೆಯನ್ನು ಶೋಧಿಸಿ ಸೂಕ್ತ ಸಾಕ್ಷ್ಯಾಧಾರಗಳು ದೊರೆತ ಬಳಿಕ ಪೋಲಿಸರು ಆತನನ್ನು ಬಂಧಿಸಿದ್ದಾರೆ.
ಫೈಜಾನ್ ಅನ್ಸಾರಿ ವಿರುದ್ಧ ಕಾನೂನುಬಾಹಿರ ಚಟುವಟಿಕೆಗಳ ಕಾಯ್ದೆಯ ಸಂಬಂಧಿತ ಸೆಕ್ಷನ್ ಅಡಿಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಾಖರ್ಂಡ್‍ನ ಲೋಹರ್ಡಗಾ ಜಿಲ್ಲೆಯ ಫೈಜ್ ಮನೆ ಮತ್ತು ಉತ್ತರ ಪ್ರದೇಶದ ಅಲಿಗಢದಲ್ಲಿ ಬಾಡಿಗೆ ಕೊಠಡಿಯಲ್ಲಿ ಶೋಧ ನಡೆಸಲಾಗಿತ್ತು. ಈ ವೇಳೆ ಅನುಮಾನಾಸ್ಪದ ವಸ್ತುಗಳು, ಹಲವಾರು ಎಲೆಕ್ಟ್ರಾನಿಕ್ ಉಪಕರಣಗಳು, ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿ ಸೋಶಿಯಲ್ ಮೀಡಿಯಾದಲ್ಲಿ ಗುಂಪು ರಚಿಸಿ ಭಾರತದಲ್ಲಿ ಐಸಿಸ್ ಚಟುವಟಿಕೆಗಳನ್ನು ಬೆಂಬಲಿಸಲು ಮಾಹಿತಿ ಹಂಚುತ್ತಿದ್ದ ಎಂದು ತಿಳಿದು ಬಂದಿದೆ. ದೇಶದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಸಂಚು ರೂಪಿಸಿದ್ದ ಎಂದು ಎನ್ಐಎ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ತನಿಖೆ ವೇಳೆ ಆತನ ಜೊತೆ ಹಲವು ಸಹಚರರು ಐಸಿಸ್ ಜೊತೆ ಕೈಜೊಡಿಸಿರುವುದು. ಅಲ್ಲದೇ ಫೈಜ್ ವಿದೇಶಿ ಮೂಲದ ಐಸಿಸ್ ಉಗ್ರರ ಸಂಪರ್ಕದಲ್ಲಿದ್ದು, ಉಗ್ರರ ಸೂಚನೆಯಂತೆ ಸಂಘಟನೆಗೆ ಯುವಕರನ್ನು ಸೆಳೆಯವ ಕಾರ್ಯದಲ್ಲಿ ಆರೋಪಿಯ ಪಾತ್ರವಿದೆ ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ.
ಈ ನಿಟ್ಟಿನಲ್ಲಿ ಎನ್ಐಎ ತನಿಖೆ ಮುಂದುವರಿಸಿದ್ದು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದೆ