Share this news

ನವದೆಹಲಿ: ನೂತನ ಸಂಸತ್ ಭವನ ಶಿಲನ್ಯಾಸದಿಂದ ಹಿಡಿದು ಇದುವರೆಗೆ ವಿವಾದಗಳಿಂದಲೇ ಸುದ್ದಿಯಾಗುತ್ತಿದೆ. ಆರಂಭದಲ್ಲಿ ಕೋವಿಡ್ ಸಮಯದಲ್ಲಿ ನೂತನ ಸಂಸತ್ ಭವನ ಯಾಕೆ? ಅನ್ನೋ ಪ್ರಶ್ನೆಯಿಂದ ಆರಂಭಗೊಂಡ ವಿವಾದ ಬಳಿಕ ಅಶೋಕ ಸ್ಥಂಭ ಸೇರಿದಂತೆ ಹಲವು ವಿವಾದಗಳು ನಡೆದುಹೋಗಿದೆ.

ಇದೀಗ ಉದ್ಘಾಟನೆ ಪ್ರಧಾನಿ ಮೋದಿ ಮಾಡಬಾರದು. ರಾಷ್ಟ್ರಪತಿ ಮಾಡಬೇಕು ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಪಟ್ಟು ಹಿಡಿದಿದೆ. ಹಲವು ಪಕ್ಷಗಳು ಉದ್ಘಾಟನೆಯಿಂದ ಹಿಂದೆ ಸರಿದಿದೆ. ಇದರ ನಡುವೆ ಮೋದಿ ನೂತನ ಸಂಸತ್ ಭವನ ಉದ್ಘಾಟನೆ ಮಾಡಬಾರದು. ರಾಷ್ಟ್ರಪತಿ ಮಾಡಬೇಕು. ಕೇಂದ್ರ ಸರ್ಕಾರ ರಾಷ್ಟ್ರಪತಿಗೆ ಅವಮಾನ ಮಾಡುತ್ತಿದೆ. ಕೋರ್ಟ್ ಮಧ್ಯಪ್ರವೇಶಿಸಬೇಕು ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಜಾ ಮಾಡಲಾಗಿದೆ.

ರಾಷ್ಟ್ರಪತಿ ಭಾರತದ ಮೊದಲ ಪ್ರಜೆ ಹಾಗೂ ಭಾರತದ ಮುಖ್ಯಸ್ಥರು. ಆದರೆ ನೂತನ ಸಂಸತ್ ಭವನ ಉದ್ಘಾಟನೆಗೆ ಲೋಕಸಭಾ ಕಾರ್ಯದರ್ಶಿ, ಕೇಂದ್ರ ಸರ್ಕಾರ ರಾಷ್ಟ್ರಪತಿಯನ್ನು ಆಹ್ವಾನಿಸಿಲ್ಲ. ಇದು ರಾಷ್ಟ್ರಪತಿಗೆ ಮಾಡಿದ ಅವಮಾನ. ಮೋದಿ ಉದ್ಘಾಟನೆ ವಿರುದ್ಧ 20ಕ್ಕೂ ಹೆಚ್ಚು  ವಿಪಕ್ಷಗಳು ಕಾರ್ಯಕ್ರಮಕ್ಕೆ ಬಹಿಷ್ಕಾರ ಹಾಕಿದೆ. ಭಾರಿ ವಿವಾದಕ್ಕೂ ಕಾರಣವಾಗುತ್ತಿದೆ.  

ಹೀಗಾಗಿ ಕೋರ್ಟ್ ಮಧ್ಯಪ್ರವೇಶಿಸಿ ಮೋದಿ ಬದಲು ರಾಷ್ಟ್ರಪತಿ ಕೈಯಿಂದ ಸಂಸತ್ ಭವನ ಉದ್ಘಾಟಿಸಲು ಆದೇಶ ನೀಡಬೇಕು ಎಂದು ಪಿಐಎಲ್‌ನಲ್ಲಿ ಹೇಳಲಾಗಿತ್ತು. ಆದರೆ ಈ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಈ ವಿಚಾರದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿದೆ. ಇಷ್ಟೇ ಅಲ್ಲ ಮೋದಿ ಉದ್ಘಾಟನೆಗೆ ಬ್ರೇಕ್ ಹಾಕಲು ನಿರಾಕರಿಸಿ ಅರ್ಜಿ ವಜಾಗೊಳಿಸಿದೆ.

ಸಂಸತ್ತು ಎಂದರೆ ರಾಷ್ಟ್ರಪತಿ ಹಾಗೂ ಸಂಸತ್ತಿನ 2 ಸದನಗಳು ಎಂದು ಸಂವಿಧಾನದಲ್ಲೇ ಇದೆ. ವರ್ಷದ ಮೊದಲ ಅಧಿವೇಶನ ಉದ್ದೇಶಿಸಿ ರಾಷ್ಟ್ರಪತಿ ಭಾಷಣ ಮಾಡುತ್ತಾರೆ. ಜತೆಗೆ ರಾಷ್ಟ್ರಪತಿ ಅವರಿಗೆ ಸಂಸತ್ತಿನ ಎರಡೂ ಸದನಗಳನ್ನು ವಿಸರ್ಜಿಸುವ ಅಧಿಕಾರ ಇರಲಿದೆ. ಈ ಕಾರಣವಾಗಿ ಈ ಕಾರ್ಯಕ್ರಮಕ್ಕೆ ರಾಷ್ಟ್ರಪತಿಯವರನ್ನು ಆಹ್ವಾನಿಸಬೇಕೆಂದು ಲೋಕಸಭೆ ಕಾರ್ಯಾಲಯಕ್ಕೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿತ್ತು. 

ವಕೀಲ ಜಯ ಸುಕೀನ್ ಸಲ್ಲಿಸಿದ್ದ ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಜಾಗೊಂಡಿದೆ. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳಿಗೂ ತೀವ್ರ ಹಿನ್ನಡೆ ತಂದಿದೆ. ನೂತನ ಸಂಸತ್ ಭವನ ಉದ್ಘಾಟನೆಯನ್ನೇ ಪ್ರಮುಖ ವಿಷಯವನ್ನಾಗಿ ಹಿಡಿದಿರುವ ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಕಾರ್ಯಕ್ರಮದಿಂದ ಬಹಿಷ್ಕಾರ ಹಾಕಿದೆ. ಆದರೆ ಹಲವು ಪಕ್ಷಗಳು ಉದ್ಘಾಟನಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದೆ. ಮಾಜಿ ಪ್ರಧಾನಿ ದೇವೇಗೌಡರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವುದಾಗಿ ಹೇಳಿದ್ದಾರೆ.

21 ವಿಪಕ್ಷಗಳು ನೂತನ ಸಂಸತ್ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಿದೆ. ಆದರೆ ಜಾತ್ಯತೀತ ಜನತಾದಳ, ತೆಲುಗು ದೇಶಂ ಪಕ್ಷ, ಬಿಜೆಡಿ, ಬಿಎಸ್‌ಪಿ ಸೇರಿದಂತೆ ಹಲವು ಪಕ್ಷಗಳು ಉದ್ಘಾಟನಾ ಕಾರ್ಯಕ್ರಮಕ್ಕೆ ಹಾಜರಾಗುವುದಾಗಿ ಸ್ಪಷ್ಟಪಡಿಸಿದೆ.

 

Leave a Reply

Your email address will not be published. Required fields are marked *