Share this news

ನವದೆಹಲಿ: ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ ಎಂದೇ ಬಿಂಬಿತವಾಗಿರುವ ಪಂಚರಾಜ್ಯಗಳ ಚುನಾವಣಾ ಫಲಿತಾಂಶದ ಪೈಕಿ ಮಧ್ಯಪ್ರದೇಶ, ರಾಜಸ್ಥಾನ ಹಾಗೂ ಛತ್ತೀಸ್ ಘಡದಲ್ಲಿ ಬಿಜೆಪಿ ಭರ್ಜರಿ ಬಹುಮತ ಪಡೆದರೆ ಇತ್ತ ಹಿಂದಿ ಭಾಷಿಕರ ಹೃದಯ ಗೆಲ್ಲುವಲ್ಲಿ ಕಾಂಗ್ರೆಸ್ ಈ ಬಾರಿಯೂ ವಿಫಲವಾಗಿದೆ.ಮಾತ್ರವಲ್ಲದೇ ತೆಲಂಗಾಣದಲ್ಲಿ ಮಾತ್ರ ಟಿಆರ್ ಎಸ್ ಪಕ್ಷವನ್ನು ಮಣಿಸಿ ಕಾಂಗ್ರೆಸ್ ಬಹುಮತ ಪಡೆದಿದೆ
ಮಧ್ಯಪ್ರದೇಶದ ಹಾಲಿ ಮುಖ್ಯಮಂತ್ರಿ ಶಿವರಾಜ್ ಚೌಹಾಣ್ ನೇತೃತ್ವದ ಬಿಜೆಪಿ ಭರ್ಜರಿ ಬಹುಮತ ಗಳಿಸಿದೆ. ಇತ್ತ ರಾಜಸ್ಥಾನವನ್ನು ಗೆಲ್ಲುವ ನಿರೀಕ್ಷೆಯಲ್ಲಿದ್ದ ಕಾಂಗ್ರೆಸ್ ಪಕ್ಷಕ್ಕೆ ಅಲ್ಲಿಯೂ ನಿರಾಸೆಯಾಗಿದೆ. ಇದಲ್ಲದೇ ಬುಡಕಟ್ಟು ಜನಾಂಗವಾಸಿಗಳ ರಾಜ್ಯವಾದ ಛತ್ತೀಸ್ ಘಡದಲ್ಲಿಯೂ ಮತದಾರ ಕಾಂಗ್ರೆಸ್ ಗೆ ಕೈಕೊಟ್ಟಿದ್ದು, ಮತದಾರ ಮೋದಿಯವರಿಗೆ ಜೈ ಎಂದಿದ್ದಾನೆ.
ಮೂರು ರಾಜ್ಯಗಳಲ್ಲಿ ಸೋಲಿನ ಛಾಯೆ ಆವರಿಸಿರುವ ಕಾಂಗ್ರೆಸ್ ಗೆ ತೆಲಂಗಾಣದಲ್ಲಿ ಮಾತ್ರ ಬೆಳಕಿನ ಬೆಳ್ಳಿರೇಖೆ ಮೂಡಿದೆ. ಏಕಾಂಗಿಯಾಗಿ ಸರ್ಕಾರ ರಚಿಸಲು ಸಜ್ಜಾಗಿರುವ ಕಾಂಗ್ರೆಸ್‌ಗೆ ಇಲ್ಲಿನ ಫಲಿತಾಂಶ ಸಂತಸ ತಂದಿದೆ. ಚಂದ್ರಶೇಖರ್ ರಾವ್ ನೇತೃತ್ವದ ಟಿಆರ್ ಎಸ್ ಪಕ್ಷವನ್ನು ಸೋಲಿಸಿದ ಕಾಂಗ್ರೆಸ್ ಗೆದ್ದುಬೀಗಿದೆ.

ಮಧ್ಯ ಪ್ರದೇಶದಲ್ಲಿ ಆಗಿದ್ದೇನು?: ಮಧ್ಯ ಪ್ರದೇಶದಲ್ಲಿ ಪ್ರಮುಖ ನಾಯಕರಾದ 78 ವರ್ಷದ ಕಮಲ್ ನಾಥ್ ಮತ್ತು 76 ವರ್ಷದ ದಿಗ್ವಿಜಯ ಸಿಂಗ್ ಅವರಿಗೆ ಸಂಪೂರ್ಣ ನಿಯಂತ್ರಣವನ್ನು ನೀಡಿದ ಕಾಂಗ್ರೆಸ್‌ಗೆ ಬಿಜೆಪಿಯ ಸಾಮಾಜಿಕ ಯೋಜನೆ ಸೂತ್ರಗಳ ಮುಂದೆ ರಾಜಕೀಯ ಲೆಕ್ಕಾಚಾರಗಳು ನಡೆಯಲಿಲ್ಲ. ಪ್ರಧಾನಮಂತ್ರಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಬಿಜೆಪಿಯು ಕೇಂದ್ರ ಮಂತ್ರಿಗಳು ಮತ್ತು ಲೋಕಸಭಾ ಸಂಸದರನ್ನು ರಾಜಕೀಯ ಅಖಾಡಕ್ಕೆ ಇಳಿಸುವ ಮೂಲಕ ಸಂಸದೀಯ ಚುನಾವಣೆಗೆ ತನ್ನೆಲ್ಲ ಶಕ್ತಿಯನ್ನು ಹಾಕಿತ್ತು. ಕಾಂಗ್ರೆಸ್ ತನ್ನ 11 ಭರವಸೆಗಳ ಸುತ್ತವೇ ಸುತ್ತಿಕೊಂಡಿತ್ತು. ಇದರಲ್ಲಿ ಹಲವಾರು ಉಚಿತ ಕೊಡುಗೆಗಳು ಸೇರಿದ್ದವು, ಆದರೆ ಬಿಜೆಪಿಯು ಈಗಾಗಲೇ ಜನರಿಗೆ ಹಲವಾರು ಸಾಮಾಜಿಕ ಯೋಜನೆಗಳ ವಿಶೇಷವಾಗಿ ‘ಲಾಡ್ಲಿ ಬೆಹ್ನಾ’ ಯೋಜನೆಯ ಲಾಭವನ್ನು ನೀಡುವುದರೊಂದಿಗೆ ಮಹಿಳಾ ಮತದಾರರು ಬಿಜೆಪಿಯ ಕೈಹಿಡಿದರು.
ಮಧ್ಯ ಪ್ರದೇಶದಲ್ಲಿ ಕೇವಲ ಒಂದು ಲೋಕಸಭಾ ಸ್ಥಾನ ಮತ್ತು ಛತ್ತೀಸ್‌ಗಢದಲ್ಲಿ ಕೇವಲ ಎರಡನ್ನು ಹೊಂದಿದ್ದ ಕಾಂಗ್ರೆಸ್‌ಗೆ ಈಗ ಹಿಂದಿ ಭಾಷಿಕರ ಹೃದಯಭಾಗದಲ್ಲಿ ಅವರ ಮನಸ್ಸಿನಿಂದ ದೂರವಾಗುತ್ತಿದೆ ಎನ್ನಬಹುದು.

ಮೂರು ರಾಜ್ಯಗಳನ್ನು ಕಳೆದುಕೊಳ್ಳುತ್ತಿರುವುದು ಕಾಂಗ್ರೆಸ್‌ಗೆ ತೀವ್ರ ಆತಂಕ ತಂದಿದೆ. ಇಲ್ಲಿ ಕಾಂಗ್ರೆಸ್‌ನ ಚುನಾವಣಾ ಅಸ್ತ್ರವಾಗಿದ್ದ ‘ಜಾತಿ ಗಣತಿ’ಯನ್ನು ಮತದಾರ ಪರಿಗಣಿಸಲೇ ಇಲ್ಲ. ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು ಸಾಧಿಸಿದ್ದ ಕಾಂಗ್ರೆಸ್ ಪಕ್ಷ ಇದೇ ಮಾದರಿಯನ್ನೇ ಪಂಚ ರಾಜ್ಯ ಚುನಾವಣೆಯಲ್ಲೂ ಅನುಸರಿಸಿತ್ತು. ಚುನಾವಣೆ ನಡೆದ ಐದೂ ರಾಜ್ಯಗಳ ಪೈಕಿ ಎಲ್ಲ ರಾಜ್ಯಗಳಲ್ಲೂ ಕಾಂಗ್ರೆಸ್ ಪಕ್ಷ ಆಯಾ ರಾಜ್ಯಗಳ ಸ್ಥಿತಿಗತಿಗೆ ಅನುಗುಣವಾಗಿ ಗ್ಯಾರಂಟಿ ಯೋಜನೆಗಳನ್ನು ಘೋಷಣೆ ಮಾಡಿತ್ತು. ಆದರೆ, ಮತದಾರ ಗ್ಯಾರಂಟಿಗಳಿಗೆ ಮನ ಸೋತಿಲ್ಲ ಅನ್ನೋದು ಚುನಾವಣೆ ಫಲಿತಾಂಶದಲ್ಲಿ ವ್ಯಕ್ತವಾಗುತ್ತಿದೆ. ರಾಜಸ್ಥಾನ, ಮಧ್ಯ ಪ್ರದೇಶ ಮಾತ್ರವಲ್ಲ, ಛತ್ತೀಸ್‌ಗಢ ರಾಜ್ಯದಲ್ಲೂ ಎಲ್ಲರ ನಿರೀಕ್ಷೆಗಳನ್ನು ಬುಡಮೇಲು ಮಾಡಿ ಬಿಜೆಪಿ ಮುನ್ನಡೆ ಸಾಧಿಸಿ ಗೆಲುವಿನತ್ತ ಹೆಜ್ಜೆ ಹಾಕಿದೆ. ತೆಲಂಗಾಣ ರಾಜ್ಯ ಮಾತ್ರ ಈ ವಿಚಾರದಲ್ಲಿ ಭಿನ್ನವಾಗಿದೆ. ಇಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸಿದೆಯಾದರೂ, ಗ್ಯಾರಂಟಿಗಳಿಗಿAತ ಹೆಚ್ಚಾಗಿ ತೆಲಂಗಾಣದ ರಾಜಕೀಯ ಪರಿಸ್ಥಿತಿಯೇ ಕಾಂಗ್ರೆಸ್ ಮೇಲುಗೈ ಸಾಧಿಸಲು ಕಾರಣ ಎಂದು ಹೇಳಲಾಗುತ್ತಿದೆ.

 

Leave a Reply

Your email address will not be published. Required fields are marked *