ಮಂಗಳೂರು: ಮುಂದಿನ ವರ್ಷದಿಂದ ಪಿಡಿಒಗಳ ಕೌನ್ಸೆಲಿಂಗ್ ಮಾಡಿ, ಪಿಡಿಒಗಳಿಗೆ ಹೆಚ್ಚಿನ ಹೊಣೆಗಾರಿಕೆ ನೀಡಲಿದ್ದೇವೆ. ಪಿಡಿಒಗಳಿಗೆ ಕಡ್ಡಾಯ ಬಯೋ ಮೆಟ್ರಿಕ್ ವ್ಯವಸ್ಥೆ ಜಾರಿಗೆ ತರಲು ಸಿದ್ದತೆ ಮಾಡಿಕೊಂಡಿದ್ದು, ಅವರ ಹಾಜರಾತಿಗೆ ಅನುಗುಣವಾಗಿ ವೇತನ ನೀಡಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
ಅವರು ಮಂಗಳೂರಿನ ಪುರಭವನದಲ್ಲಿ ಬುಧವಾರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ ಪಂಚಾಯತ್ ರಾಜ್ ಪ್ರತಿನಿಧಿಗಳ ಜಿಲ್ಲಾ ಸಮಾವೇಶಕ್ಕೆ ಚಾಲನೆ ನೀಡಿ ಮಾತನಾಡಿ, ದೇಶ 21ನೇ ಶತಮಾನದಲ್ಲಿ ಮುಂದುವರಿದ ರಾಷ್ಟ್ರವಾಗಬೇಕು, ವಿಶ್ವದಲ್ಲಿ ಅಗ್ರಸ್ಥಾನ ಪಡೆಯಬೇಕು ಎಂದಾದರೆ, ಕೇವಲ ಸಂಸತ್ ನಲ್ಲಿ ಮಾಡುವ ನೀತಿಯಿಂದ ಅಷ್ಟೇ ಅಲ್ಲ, ನಮ್ಮ ಹಳ್ಳಿಗಳು, ಸಾಮಾಜಿಕವಾಗಿ, ಆರ್ಥಿಕವಾಗಿ ಮುಂದುವರೆದಾಗ ಹಾಗೂ ಸಶಕ್ತಗೊಂಡಾಗ ಮಾತ್ರ ಸಾಧ್ಯ ಎಂದು ರಾಜೀವ್ ಗಾಂಧಿ ಅವರು ಸಂಸತ್ ನಲ್ಲಿ ಮಾಡಿರುವ ಭಾಸಣದಲ್ಲಿ ಅಂದೇ ಹೇಳಿದ್ದರು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಪಂಚತಂತ್ರ-2 ಎಂಬ ಹೊಸ ತಂತ್ರಜ್ಞಾನವನ್ನು ಆರಂಭಿಸುತ್ತಿದ್ದೇವೆ, ಜಿಲ್ಲಾ ಪಂಚಾಯತ್ ಹಾಗೂ ಗ್ರಾಮ ಪಂಚಾಯತಿ ಸಭೆಗಳು ಸೇರಿದಂತೆ ಎಲ್ಲವನ್ನೂ ಪರಿಶೀಲಿಸಲು ಈ ತಂತ್ರಜ್ಞಾನ ವ್ಯವಸ್ಥೆಯಿಂದ ಅನುಕೂಲವಾಗಲಿದೆ ಎಂದು ಹೇಳಿದರು.




