ಪಡುಬಿದ್ರಿ: ಪಡುಬಿದ್ರಿ ಗ್ರಾ. ಪಂ. ಅಭಿವೃದ್ಧಿ ಅಧಿಕಾರಿ ಮಂಜುನಾಥ ಶೆಟ್ಟಿ ಎಂಬವರ ಕರ್ತವ್ಯಕ್ಕೆ ಅಡ್ಡಿಪಡಿಸಿ ಜೀವ ಬೆದರಿಕೆ ಹಾಕಿದ ಆರೋಪದ ಮೇಲೆ ಪಂಚಾಯತ್ ಸದಸ್ಯನ ವಿರುದ್ಧ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ನ. 17ರಂದು ಕಚೇರಿಯಲ್ಲಿ ಕರ್ತವ್ಯ ನಿರತರಾಗಿದ್ದ ವೇಳೆ ಗ್ರಾ. ಪಂ. ಸದಸ್ಯ ಮಯ್ಯದಿ ಅವರನ್ನು ಕೈಯಿಂದ ದೂಡಿ, ಜೀವಬೆದರಿಕೆ ಒಡ್ಡಿದ್ದಾನೆ ಎಂದು ಆರೋಪಿಸಲಾಗಿದೆ.
ಪಂಚಾಯತ್ ಸದಸ್ಯ ಮಯ್ಯದಿ ತನ್ನ ಕೆಲಸವನ್ನು ತಕ್ಷಣವೇ ಮಾಡಿಕೊಡುವಂತೆ ಮಂಜುನಾಥ ಶೆಟ್ಟಿ ಅವರನ್ನು ಒತ್ತಾಯಿಸಿದ್ದಾನೆ. ಅದಕ್ಕೆ ಪ್ರತಿಯಾಗಿ ಪಿಡಿಓ ಮಂಜುನಾಥ ಶೆಟ್ಟಿಯವರು ಅರ್ಜಿ ಪರಿಶೀಲಿಸಿ ಮಾಡಿಕೊಡುವುದಾಗಿ ಹೇಳಿದಾಗ ಮಾತಿಗೆ ಮಾತು ಬೆಳೆದು ಮಯ್ಯದಿ ಅಧಿಕಾರಿಯನ್ನು ಕೈಯಿಂದ ದೂಡಿ ಜೀವ ಬೆದರಿಕೆ ಹಾಕಿದ್ದಾನೆ ಎಂದು ಮಂಜುನಾಥ ಶೆಟ್ಟಿ ಪಡುಬಿದ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಪಡುಬಿದ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.








