ಉತ್ತರಪ್ರದೇಶ: ಕುಖ್ಯಾತ ಭಯೋತ್ಪಾದಕ ಹಾಗೂ ಭೂಗತ ಪಾತಕಿ ಅತೀಕ್ ಅಹಮ್ಮದ್ ಹಾಗೂ ಆತನ ಸಹೋದರ ಅಶ್ರಫ್ ಅಹಮ್ಮದ್ ಎಂಬವರನ್ನು ಪೊಲೀಸರು ಶನಿವಾರ ರಾತ್ರಿ ಪ್ರಯಾಗ್ ರಾಜ್ ಆಸ್ಪತ್ರೆಯೊಂದಕ್ಕೆ ವೈದ್ಯಕೀಯ ತಪಾಸಣೆಗೆ ಕರೆದೊಯ್ಯುವ ವೇಳೆ ಪತ್ರಕರ್ತರ ಸೋಗಿನಲ್ಲಿ ಬಂದ ಮೂವರು ಭೂಗತ ಪಾತಕಿಗಳು ಅತೀಕ್ ಅಹಮ್ಮದ್ ಹಾಗೂ ಅಶ್ರಫ್ ಅಹಮ್ಮದ್ ನನ್ನು ಹತ್ತಿರದಿಂದಲೇ ಗುಂಡಿನ ಸುರಿಮಳೆಗೈದು ಭೀಕರವಾಗಿ ಹತ್ಯೆಗೈದಿದ್ದಾರೆ
ಪೊಲೀಸರು ಅತೀಕ್ ಹಾಗೂ ಅಶ್ರಫ್ ಇಬ್ಬರನ್ನು ಜೀಪಿನಲ್ಲಿ ಕರೆತಂದು ಆಸ್ಪತ್ರೆಯ ಬಳಿ ಕೆಳಗೆ ಇಳಿಯುತ್ತಿದ್ದಾಗ ಪತ್ರಕರ್ತರು ಆರೋಪಿಗಳ ಜತೆ ಬೈಟ್ ಪಡೆಯಲು ಮುಂದಾಗಿದ್ದರು. ಇದೇವೇಳೆ ಅತೀಕ್ ಅಹಮ್ಮದ್ ಇನ್ನೇನು ಪತ್ರಕರ್ತರ ಪ್ರಶ್ನೆಗಳಿಗೆ ಉತ್ತರಿಸಬೇಕೆನ್ನುವಷ್ಟರಲ್ಲಿ ಪತ್ರಕರ್ತರ ಸೋಗಿನಲ್ಲಿ ಹಿಂದೆ ಅಡಗಿಕೊಂಡಿದ್ದ ಪಾತಕಿಗಳು ಏಕಾಎಕಿ ಇಬ್ಬರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ.
ಇದರಿಂದ ಒಂದು ಕ್ಷಣ ವಿಚಲಿತರಾದ ಪೊಲೀಸರು ಕತ್ತಲಲ್ಲಿ ದಾಳಿಯಿಂದ ತಪ್ಪಿಸಿಕೊಳ್ಳಲು ಯತ್ನಿಸುವ ನಡುವೆಯೂ ಹತ್ಯೆಗೈದ ಮೂವರನ್ನು ಬಂಧಿಸಿದ್ದಾರೆ.
ಬಂಧಿತರನ್ನು ಲವಕೇಶ್ ತಿವಾರಿ,ಅರುಣ್ ಮೌರ್ಯ ಹಾಗೂ ಸನ್ನಿ ಎಂದು ಗುರುತಿಸಲಾಗಿದೆ. ಬಂಧಿತರು 20 ರಿಂದ 25 ವರ್ಷ ವಯಸ್ಸಿನವರಾಗಿದ್ದು, ಇದು ಗ್ಯಾಂಗ್ ಸ್ಟರ್ ಗಳ ಪ್ರತೀಕಾರದ ಹತ್ಯೆ ಎನ್ನಲಾಗಿದೆ.