ಉಡುಪಿ:ಕಾರ್ಕಳ ತಾಲುಕಿನ ಬೈಲೂರಿನ ಉಮಿಕ್ಕಲ್ ಬೆಟ್ಟದಲ್ಲಿ ಪ್ರತಿಷ್ಟಾಪಿಸಲಾದ ಪರಶುರಾಮನ ಮೂರ್ತಿ ನಕಲಿ ಎನ್ನುವುದು ಸುಳ್ಳು ಆರೋಪವಾಗಿದೆ ಎಂದು ಉಡುಪಿ ನಿರ್ಮಿತಿ ಕೇಂದ್ರದ ಯೋಜನಾ ನಿರ್ದೇಶಕ ಅರುಣ್ ಕುಮಾರ್ ಹೇಳಿದ್ದಾರೆ.
ಸುಮಾರು 300 ಅಡಿ ಎತ್ತರದಲ್ಲಿರುವ ಕಲ್ಲುಬಂಡೆಯ ಮೇಲೆ 33 ಅಡಿ ಎತ್ತರದ ಮೂರ್ತಿಯನ್ನು ಸ್ಥಾಪಿಸುವುದು ಅತ್ಯಂತ ಸವಾಲಿನ ಕೆಲಸವಾಗಿತ್ತು. ನಿಗದಿತ ಅವಧಿಯೊಳಗೆ ಕಾಮಗಾರಿಯನ್ನು ಪೂರ್ಣಗೊಳಿಸುವ ಗುರಿ ಇರಿಸಿಕೊಂಡು, ನಿರ್ಮಿತಿ ಏಜೆನ್ಸಿ, ಜಿಲ್ಲಾಡಳಿತ, ಶಾಸಕರು ಮತ್ತು ಊರಿನ ಸಮಸ್ತ ನಾಗರಿಕರ ಸಹಕಾರದಿಂದ 100-150 ನುರಿತ ಕೆಲಸಗಾರರು ಹಗಲು-ರಾತ್ರಿ ಶ್ರಮಿಸಿದ ಪರಿಣಾಮವಾಗಿ ಅತ್ಯಲ್ಪ ಅವಧಿಯೊಳಗಾಗಿ ಕಾಮಗಾರಿಯನ್ನು ಒಂದುಹಂತದವರೆಗೆ ಪೂರ್ಣಗೊಳಿಸಿದ್ದೇವೆ.ಆದರೆ ಥೀಮ್ ಪಾರ್ಕಿನಲ್ಲಿ ಇನ್ನೂ ಸಣ್ಣಪುಟ್ಟ ಕೆಲಸಗಳು ಬಾಕಿಯಿದ್ದು, ಮೂರ್ತಿಯನ್ನು ಬಲಪಡಿಸುವ ಹಾಗೂ ಭಾರವನ್ನು ತಡೆದುಕೊಳ್ಳುವ ನಿಟ್ಟಿನಲ್ಲಿ ಮೂರ್ತಿಯ ಸ್ವರೂಪದಲ್ಲಿ ಸಣ್ಣಪುಟ್ಟ ಬದಲಾವಣೆಗಳನ್ನು ಮಾಡಬೇಕಾಗಿದೆ ಎಂದು ಶಿಲ್ಪಿ ಹೇಳಿದ್ದಾರೆ. ಅಲ್ಲದೇ ಮಾರ್ಪಾಡುಗಳನ್ನು ಮಾಡಬೇಕಿರುವ ಕುರಿತು ಈ ಮೊದಲೇ ಸಾರ್ವಜನಿಕ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಲಾಗಿತ್ತು ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಪರಶುರಾಮ ಥೀಮ್ ಪಾರ್ಕನ್ನು ಅತ್ಯಂತ ಸುಂದರ ಹಾಗೂ ಸುರಕ್ಷಿತವಾಗಿ ನಿರ್ಮಿಸುವ ಜವಾಬ್ದಾರಿ ಹಾಗೂ ಹೊಣೆಗಾರಿಕೆ ನಮ್ಮದು.ಈ ನಿಟ್ಟಿನಲ್ಲಿ ಜಿಲ್ಲಾಡಳಿತದ ಅನುಮತಿ ಪಡೆದು ಸಾರ್ವಜನಿಕರಿಗೆ ಮಾಹಿತಿ ನೀಡಿ ಕಾಮಗಾರಿಯನ್ನು ಆರಂ ಭಿಸಲಾಗಿದೆ ಎಂದು ಅರುಣ್ ಕುಮಾರ್ ತಿಳಿಸಿದ್ದಾರೆ
ಈಗಾಗಲೇ ಉಸ್ತುವಾರಿ ಸಚಿವರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಈ ನಿಟ್ಟಿನಲ್ಲಿ ಕಾಮಗಾರಿಯನ್ನು ಪುನಃ ಪ್ರಾರಂಭಿಸಲು ಪ್ರವಾಸಿಗರ ಭೇಟಿಯನ್ನು ನಿರ್ಬಂಧಿಸುವಂತೆ ತಹಶೀಲ್ದಾರ್‌ರಿಗೆ ಮನವಿ ಮಾಡಿ ಅನುಮತಿ ಪಡೆದುಕೊಳ್ಳಲಾಗಿದೆ.
ಪರಶುರಾಮ ಥೀಮ್ ಪಾರ್ಕಿನ ಯೋಜನಾ ವೆಚ್ಚ ರೂ. 14 ಕೋಟಿಯಾಗಿದ್ದು 6.50 ಕೋಟಿ ರೂ ಮಾತ್ರ ಬಿಡುಗಡೆಯಾಗಿದೆ. ಪೂರ್ತಿ ಅನುದಾನ ಬಿಡುಗಡೆಯಾದ ಬಳಿಕ ಕಾಮಗಾರಿಯನ್ನು ಪೂರ್ಣ ಗೊಳಿಸಿ ಇಲಾಖೆಗೆ ಹಸ್ತಾಂತರಿಸ ಲಾಗುವುದು ಎಂದು ಯೋಜನಾ ನಿರ್ದೇಶಕ ಅರುಣ್ ಕುಮಾರ್ ತಿಳಿಸಿದ್ದಾರೆ.