ಕಾರ್ಕಳ:ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಸ್ಥಾಪಿಸಲಾಗಿರುವ ಪರಶುರಾಮ ಥೀಮ್ ಪಾರ್ಕಿಗೆ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಶನಿವಾರ ಭೇಟಿ ಯೋಜನೆಯ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಪರಶುರಾಮ ಪ್ರತಿಮೆಯ ನೈಜತೆ ಹಾಗೂ ಗುಣಮಟ್ಟದ ವಿಚಾರದಲ್ಲಿ ಸಾರ್ವಜನಿಕ ವಲಯದಲ್ಲಿ ನಡೆದಿರುವ ಪರವಿರೋಧ ಚರ್ಚೆಗಳು ಒಂದಷ್ಟು ಪ್ರತಿಭಟನೆಗಳು ನಡೆದ ಹಿನ್ನಲೆಯಲ್ಲಿ ಸಚಿವರು ಭೇಟಿ ನೀಡಿ ಪರಿಶೀಲನೆ ನಡಸೆಸುವಂತೆ ಒತ್ತಾಯ ಕೇಳಿಬಂದ ಕಾರಣದಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಥೀಮ್ ಪಾರ್ಕಿಗೆ ಭೇಟಿ ನೀಡಿ ನಿರ್ಮಿತಿ ಕೇಂದ್ರದ ಅಧಿಕಾರಿಗಳಿಂದ ಈ ಯೋಜನೆಯ ಸಂಪೂರ್ಣ ನೀಲ ನಕಾಶೆ ಹಾಗೂ ಸಮಗ್ರ ಯೋಜನಾ ವರದಿಯನ್ನು ಪಡೆದುಕೊಂಡರು.ಇದೇವೇಳೆ ಪರಶುರಾಮ ಪ್ರತಿಮೆಯ ಕಾಮಗಾರಿಯ ಕುರಿತ ಸಚಿವೆ ಹೆಬ್ಬಾಳ್ಕರ್ ಪ್ರಶ್ನೆಗೆ ಉತ್ತರಿಸಿದ ನಿರ್ಮಿತಿ ಕೇಂದ್ರದ ಅಧಿಕಾರಿ,ಪ್ರತಿಮೆಯ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ, ಅಡಿಪಾಯವನ್ನು ಗಟ್ಟಿಗೊಳಿಸುವ ಜತೆಗೆ ಪ್ರತಿಮೆಯ ಒಂದಷ್ಟು ಕಾಮಗಾರಿಗಳು ಇನ್ನೂ ಬಾಕಿಯಿದೆ ಎಂದಾಗ ಇದಕ್ಕೆ ಸಿಟ್ಟಾದ ಸಚಿವೆ ಹೆಬ್ಬಾಳ್ಕರ್ ಹಾಗಾದರೆ ತರಾತುರಿಯಲ್ಲಿ ಸಾರ್ವಜನಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿ ಪ್ರತಿಮೆ ಸ್ಥಾಪಿಸಿರುವ ಅನಿವಾರ್ಯತೆ ಏನಿತ್ತು, ಏನಾದರೂ ಅವಘಡಗಳು ಸಂಭವಿಸಿದರೆ ಯಾರು ಹೊಣೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಬಳಿಕ ಸುದ್ದಿಗಾರರ ಜತೆ ಮಾತನಾಡಿ, ನಾನು ಮೂರ್ತಿಯ ಪರಿಶೀಲನೆ ನಡೆಸಲು ಬಂದಿದ್ದೇನೆಯೇ ಹೊರತು ಯಾರ ಪ್ರಚೋದನೆಗೂ ಒಳಗಾಗದೇ ಯಾರ ಮೇಲೂ ಆರೋಪ ಮಾಡಲು ಇಲ್ಲಿಗೆ ಬಂದಿಲ್ಲ,ಈ ಕುರಿತು ಅಧಿಕಾರಿಗಳ ಜತೆಗೆ ವಿವರವಾಗಿ ಚರ್ಚಿಸಿ ಪರಿಶೀಲಿಸಲಾಗುವುದು, ಆದರೆ ರಾಜಕೀಯ ಲಾಭಕ್ಕಾಗಿ ಸಾರ್ವಜನಿಕರ ಸುರಕ್ಷತೆಯನ್ನು ನಿರ್ಲಕ್ಷಿಸಿ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ ಎಂದು ಆರೋಪಿಸಿದರು.ಜನರ ಭಾವನೆಗಳಿಂದ ಜನರ ದಿಕ್ಕುತಪ್ಪಿಸಿ ಈ ಯೋಜನೆಯ ಲಾಭ ಪಡೆದುಕೊಳ್ಳುವುದು ಸರಿಯಲ್ಲ, ಈ ಯೋಜನೆಯಲ್ಲಿ ಯಾವ ಇಲಾಖೆಯ ಅಧಿಕಾರಿಗಳ ಕರ್ತವ್ಯಲೋಪವಾಗಿದೆ ಎಂದು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದು ಎಂದರು.ಪ್ರತಿಮೆಯ ನೈಜತೆ ಕುರಿತು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಸಚಿವೆ, ಈ ಮೂರ್ತಿಯನ್ನು ಅಸಲಿ ಅಥವಾ ನಕಲಿ ಎಂದು ಹೇಳಲು ಸಾಧ್ಯವಿಲ್ಲ ಪ್ರತಿಮೆಯ ನೈಜತೆಯ ಕುರಿತು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ ಆದರೆ ಕಾಮಗಾರಿಯ ಮುಕ್ತಾಯ ಹಂತದ ಕುರಿತು ಸ್ಪಷ್ಟತೆಯಿಲ್ಲ ಈ ಕುರಿತು ಪರಿಶೀಲಿಸಿ ಮುಂದಿನ ಕ್ರಮಕೈಗೊಳ್ಳಲಾಗುವುದೆಂದರು.
ಸ್ಥಳೀಯ ಕಾಂಗ್ರೆಸ್ ಮುಖಂಡರಾದ ಮುನಿಯಾಲು ಉದಯ ಶೆಟ್ಟಿ, ಸುಧಾಕರ ಶೆಟ್ಟಿ, ದೀಪಕ್ ಕೋಟ್ಯಾನ್ ಮುಂತಾದವರು ಸಚಿವರಿಗೆ ಸಾಥ್ ನೀಡಿದರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಮಮತಾದೇವಿ, ಕುಂದಾಪುರ ಸಹಾಯಕ ಕಮೀಷನರ್ ರಶ್ಮಿ,ಎಸ್,ಆರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ ಮುಂತಾದವರು ಉಪಸ್ಥಿತರಿದ್ದರು