Share this news

ಕಾರ್ಕಳ: ಮೂಲಭೂತ ಸೌಕರ್ಯಗಳನ್ನು ಒದಗಿಸುವ ನಿಟ್ಟಿನಲ್ಲಿ ಕಾರ್ಕಳ ಎಂದಿಗೂ ಹಿಂದೆಬಿದ್ದಿಲ್ಲ,ಕಾರ್ಕಳದ ಜನತೆಯ ಋಣ ನನ್ನ ಮೇಲಿದೆ,ಕಾರ್ಕಳವನ್ನು ಅಭಿವೃದ್ದಿಪಡಿಸುವ ದೂರದೃಷ್ಟಿಯನ್ನಿಟ್ಟುಕೊಂಡು ರಸ್ತೆ, ಸೇತುವೆಗಳು,ಕಿಂಡಿಅಣೆಕಟ್ಟುಗಳ ನಿರ್ಮಾಣ, ಹಕ್ಕುಪತ್ರ ವಿತರಣೆ,ಸರಕಾರಿ ಕಚೇರಿಗಳ ನವೀಕರಣ ಹೀಗೆ ಹತ್ತಾರು ಅಭಿವೃದ್ದಿ ಚಟುವಟಿಕೆಗಳನ್ನು ನಡೆಸುವಂತಾಗಿದೆ.ಇನ್ನುಮುAದೆಯೂ ಕಾರ್ಕಳದ ಜನತೆ ನನಗೆ ಅವಕಾಶ ಮಾಡಿಕೊಟ್ಟಲ್ಲಿ ಮುಂದಿನ ಎರಡು ವರ್ಷದೊಳಗೆ ಕಾರ್ಕಳವನ್ನು ರಾಜ್ಯದ ಪ್ರವಾಸಿ ಸರ್ಕ್ಯೂಟನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ ಎಂದು ಇಂಧನ ಸಚಿವ ಸುನಿಲ್ ಕುಮಾರ್ ಹೇಳಿದರು.


ಅವರು ಕಾರ್ಕಳದ ಬೈಲೂರಿನ ಪರಶುರಾಮ ಥೀಮ್ ಪಾರ್ಕಿನಲ್ಲಿ ಭಜನಾ ಮಂದಿರವನ್ನು ಉದ್ಘಾಟಿಸಿದ ಬಳಿಕ ನಡೆದ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.ಕಾರ್ಕಳ ಜನರ ಸಹಕಾರದಿಂದ ಕಳೆದವರ್ಷ ಇಡೀ ರಾಜ್ಯವೇ ಕಾರ್ಕಳದತ್ತ ತಿರುಗಿನೋಡುವಂತೆ ಕಾರ್ಕಳ ಉತ್ಸವವನ್ನು ಅದ್ದೂರಿಯಾಗಿ ನಡೆಸಲಾಯಿತು.ಕಾರ್ಕಳವನ್ನು ಮಾದರಿಕ್ಷೇತ್ರವನ್ನಾಗಿಸಬೇಕು ಕಾರ್ಕಳಕ್ಕೆ ಬರುವ ಪ್ರವಾಸಿಗರು ಕೇವಲ ಒಂದೆರಡು ಪ್ರವಾಸಿತಾಣಗಳಿಗೆ ಭೇಟಿ ನೀಡಿ ಹೋಗಬಾರದು ಬದಲಾಗಿ ಇಡೀದಿನ ಕಾರ್ಕಳದ ಪ್ರವಾಸಿತಾಣಗಳಿಗೆ ಭೇಟಿ ನೀಡುವಂತಾಗಬೇಕು ಎನ್ನುವ ಕಲ್ಪನೆಯನ್ನಿಟ್ಟುಕೊಂಡು ಮುಂದಿನ ದಿನಗಳಲ್ಲಿ ಕಾರ್ಕಳದ ರಾಮಸಮುದ್ರವನ್ನು ಐತಿಹಾಸಿಕ ಪ್ರವಾಸಿತಾಣವಾಗಿ ರಾಜ್ಯದಲ್ಲಿ ಗುರುತಿಸುವಂತಾಗಬೇಕು ಇದಕ್ಕೆ ಕಾರ್ಕಳದ ಜನತೆ ಅವಕಾಶ ಮಾಡಿಕೊಡಬೇಕೆಂದು ಮನವಿ ಮಾಡಿದರು.


ವಿಧಾನಪರಿಷತ್ ಮಾಜಿ ಸದಸ್ಯ ಕ್ಯಾ.ಗಣೇಶ್ ಕಾರ್ಣಿಕ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ, ತುಳುನಾಡಿನ ಸೃಷ್ಟಿಕೃರ್ತ ಪರಶುರಾಮನ ಮೂರ್ತಿಯನ್ನು ಕಾರ್ಕಳದಲ್ಲಿ ಪ್ರತಿಷ್ಠಾಪಿಸುವ ಅಧ್ಬುತ ಪರಿಕಲ್ಪನೆಯನ್ನು ಸಾಕಾರಗೊಳಿಸಿದ ಸುನೀಲ್ ಕುಮಾರ್ ಅವರ ಕಾರ್ಯವೈಖರಿ ರಾಜ್ಯದ ಎಲ್ಲಾ ಸಚಿವರಿಗಿಂತ ವಿಭಿನ್ನವಾಗಿದೆ.ಕಾರ್ಕಳ ಉತ್ಸವ ಹಾಗೂ ಪರಶುರಾಮ ಥೀಮ್ ಪಾರ್ಕ್ ಮೂಲಕ ಅರ್ಥಿಕ ಚಟುವಟಿಕೆಗಳ ಪುನಶ್ಚೇತನ ಸಾಕ್ಷಿಯಾಗಿದೆ ಎಂದರು.


ಈ ಸಂದರ್ಭದಲ್ಲಿ ಕಾರ್ಯಕ್ರಮಕ್ಕೆ ವಿದ್ಯುತ್ ವ್ಯತ್ಯಯವಾಗದಂತೆ ಅಹರ್ನಿಶಿ ದುಡಿದ ಮೆಸ್ಕಾಂ ಅಧಿಕಾರಿಗಳನ್ನು ಸನ್ಮಾನಿಸಲಾಯಿತು.
ವೇದಿಕೆಯಲ್ಲಿ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಣಿರಾಜ ಶೆಟ್ಟಿ,ಬೈಲೂರು ರಾಮಕೃಷ್ಣ ಆಶ್ರಮದ ವಿನಯಕಾನಂದಜಿ, ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಕಾರ್ಕಳ ನಿರ್ದೇಶಕ ಭಾಸ್ಕರ್, ಕನ್ನಡ ಸಂಸ್ಕೃತಿ ಇಲಾಖೆಯ ಉಡುಪಿ ಜಿಲ್ಲಾ ಉಪನಿರ್ದೇಶಕಿ ಪೂರ್ಣಿಮಾ, ಉದ್ಯಮಿ ಸತೀಶ್ ಪೈ ಮುಂತಾದವರು ಉಪಸ್ಥಿತರಿದ್ದರು.
ರವೀಂದ್ರ ಮಡಿವಾಳ ಸ್ವಾಗತಿಸಿ, ರಾಜೇಂದ್ರ ಭಟ್ ಕಾರ್ಯಕ್ರಮ ನಿರೂಪಿಸಿದರು.

Leave a Reply

Your email address will not be published. Required fields are marked *