ಕಾರ್ಕಳ:ಪರಶುರಾಮ ಥೀಂ ಪಾರ್ಕ್ ಕಾಮಗಾರಿ ಇನ್ನೂ ಪೂರ್ತಿಯಾಗಿಲ್ಲ, ವಿನ್ಯಾಸ ಬದಲಾವಣೆಯಿದೆ ಎಂದು ಇಲಾಖೆ ಸ್ಪಷ್ಟನೆ ನೀಡಿದ್ದರೂ ಕಾಂಗ್ರೆಸ್ ಮತ್ತು ಅದರ ‘ಬಿ ಟೀಂ’ ಮೂಲಕ ನ್ಯಾಯಾಲಯದಿಂದ ತಡೆಯಾಜ್ಞೆ ತರುವ ಪ್ರಯತ್ನ ನಡೆಸಿತ್ತು. ಕಾಂಗ್ರೆಸ್‌ನ ಮಾನಸಿಕತೆಯ ದ್ವಿಪಾತ್ರದ ನಟನೆಗೆ ಕೊನೆಗೂ ನ್ಯಾಯಾಲಯದಲ್ಲಿ ಹಿನ್ನಡೆಯಾಗಿದೆ. ಕಾಂಗ್ರೆಸ್ ಹಾಗೂ ಅದರ ಬಿ ಟೀಂನ ಸುಳ್ಳು ಅಪಪ್ರಚಾರದ ವಿರುದ್ಧ ಸತ್ಯಕ್ಕೆ ಗೆಲುವಾಗಿದೆ ಎಂದು ಕಾರ್ಕಳ ಬಿಜೆಪಿ ಕ್ಷೇತ್ರಾಧ್ಯಕ್ಷ ಮಹಾವೀರ ಹೆಗ್ಡೆ ಹಾಗೂ ಪ್ರಧಾನ ಕಾರ್ಯದರ್ಶಿ ನವೀನ್ ನಾಯಕ್ ಹೇಳಿದ್ದಾರೆ.
ಕಾರ್ಕಳ ಕ್ಷೇತ್ರವನ್ನು ಪ್ರವಾಸಿ ಕ್ಷೇತ್ರವನ್ನಾಗಿಸಿ ಆರ್ಥಿಕತೆ ಬಲಗೊಳಿಸುವ ದೂರದೃಷ್ಟಿಯ ಯೋಜನೆಗೆ ತಡೆಯೊಡ್ಡಿ ಪರಶುರಾಮ ಥೀಂ ಪಾರ್ಕ್ ಅನ್ನು ಶಾಶ್ವತವಾಗಿ ಮುಚ್ಚುವ ಹುನ್ನಾರಕ್ಕೆ ಕೊನೆಗೂ ನ್ಯಾಯಾಲಯದಲ್ಲಿ ಛೀಮಾರಿ ಹಾಕಿಸಿಕೊಳ್ಳುವಂತಾಗಿದೆ.
ಕಾರ್ಕಳದ ಅಭಿವೃದ್ಧಿ ಮತ್ತು ಪ್ರವಾಸಿ ತಾಣವಾಗುವುದನ್ನು ಕಾಂಗ್ರೆಸ್ ಮೊದಲಿನಿಂದಲೂ ವಿರೋಧಿಸುತ್ತಲೇ ಬಂದಿದೆ. ಅದೇ ಕಾರಣಕ್ಕೆ ಕ್ಷೇತ್ರದಲ್ಲಿ ನಿರಂತರವಾಗಿ ವಿವಿಧ ರೀತಿಯ ಅಪಪ್ರಚಾರದಲ್ಲಿ ಅದು ತೊಡಗಿತ್ತು. ಕುಂಟುನೆಪಗಳ ಮೂಲಕ ಅಭಿವೃದ್ಧಿಗೆ ತಡೆಯೊಡ್ಡುವ, ಕಾಮಗಾರಿ ನಿಲ್ಲಿಸುವ ಕೆಲಸ ಮಾಡುತ್ತಾ ಬಂದಿತ್ತು.
ಅಪಪ್ರಚಾರವನ್ನೇ ಸಾವಿರ ಬಾರಿ ಪುನರುಚ್ಚರಿಸುತ್ತ ಜನರಲ್ಲಿ ತಪ್ಪು ಭಾವನೆ ಮೂಡಿಸುತ್ತಿದ್ದ ಕಾಂಗ್ರೆಸ್ ಎ ಮತ್ತು ಬಿ ಟೀಂನ ನಿಜ ಬಣ್ಣ ಬಯಲಾಗಿದೆ.
ಕಾಂಗ್ರೆಸ್ ಕಾಮಗಾರಿ ಮುಂದುವರೆಸಬೇಕು ಎಂದು ಹೇಳಿಕೊಳ್ಳುವ ಜತೆ ಜತೆಗೆ ತನ್ನದೇ ಬಿ ಟೀಂ ಮೂಲಕ ನ್ಯಾಯಾಲಯದಲ್ಲಿ ತಡೆಯಾಜ್ಞೆಗೆ ಪ್ರಯತ್ನಿಸಿ ಕೈ ಸುಟ್ಟುಕೊಂಡಿದೆ. ಕಾಂಗ್ರೆಸ್‌ನ ದ್ವಿಪಾತ್ರದ ಕರಾಳ ಮುಖವಾಡ ಕಳಚಿದೆ. ಅಭಿವೃದ್ಧಿ ವಿರೋಧಿಗಳ ಕುಟಿಲ ರಾಜಕೀಯ ನೀತಿಗೆ ಸೋಲಾಗಿದೆ.
ಚುನಾವಣೆಯಲ್ಲಿ ಬಿ ಟೀಂ ಹೊರಗಿನಿಂದ ಬಂದು ಕ್ಷೇತ್ರದಲ್ಲಿ ಅಪಪ್ರಚಾರ ನಡೆಸಿತ್ತು. ಅವರನ್ನು ಪೋಷಿಸಿದ ಕಾಂಗ್ರೆಸ್ ಯೋಜನೆ ನಿಲ್ಲಿಸಲು ಶತಾಯಗತಾಯ ಪ್ರಯತ್ನ ನಡೆಸಿತ್ತು, ಅಲ್ಲಿ ಮತ್ತೆ ಕ್ರಶರ್ ಅಧಿಪತ್ಯ ಸ್ಥಾಪಿಸಲು ಕೆಲವರು ಹುನ್ನಾರ ನಡೆಸುತ್ತಿದ್ದಾರೆ. ಮೂರ್ತಿಯ ವಿನ್ಯಾಸ ಮತ್ತು ಮುಂದುವರೆದ ಕಾಮಗಾರಿ ನಿಲ್ಲಿಸಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕಾರ್ಕಳದ ಕಾಂಗ್ರೆಸ್ಸಿಗೆ ಅಭಿವೃದ್ಧಿ ಜನಪರ ಕಾಳಜಿ ಅಗತ್ಯವಿಲ್ಲವೇ ಎಂದು ಪ್ರಶ್ನಿಸಿರುವ ಅವರು ಕಾಂಗ್ರೆಸ್ ಒಟ್ಟಾರೆ ವಾಮಮಾರ್ಗದಲ್ಲಿ ಯೋಜನೆಯನ್ನು ರದ್ದುಗೊಳಿಸಲು ಹುನ್ನಾರ ನಡೆಸುತ್ತಿದೆ ಎಂದು ಹೇಳಿಕೆಯಲ್ಲಿ ಆರೋಪಿಸಿದ್ದಾರೆ.