Share this news

ಕಾರ್ಕಳ: ಬೈಲೂರಿನ ಉಮಿಕಲ್ಲು ಬೆಟ್ಟದಲ್ಲಿ ಸ್ಥಾಪಿಸಲಾಗಿರುವ  ಪರಶುರಾಮ ಮೂರ್ತಿಯ ವಾಸ್ತವ್ಯ ವಿಚಾರ ಮರೆಮಾಚುವ ಪ್ರಯತ್ನವಾಗಿ ಶಾಸಕ ಸುನಿಲ್ ಕುಮಾರ್ ವಿಷಯಾಂತರ ಮಾಡುವುದರೊಂದಿಗೆ ನೂರಾರು ಬಾರಿ ಸುಳ್ಳನ್ನೇ ಸತ್ಯವನ್ನಾಗಿರಿಸುವ ಪ್ರಯತ್ನ ನಡೆಸುತ್ತಿದ್ದಾರೆ. ಸುಳ್ಳನ್ನೇ ಅವರ ಮನೆ ದೇವರನ್ನಾಗಿ ಮಾಡಿಕೊಂಡು ಜನರನ್ನು ಜನರನ್ನು ದಿಕ್ಕುತಪ್ಪಿಸುತ್ತಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಆರೋಪಿಸಿದ್ದಾರೆ.

ಪರಶುರಾಮನನ್ನು ನಾವೆಲ್ಲರೂ ಆರಾಧಿಸುತ್ತೇವೆ, ಅದೊಂದು ಧಾರ್ಮಿಕ ವಿಚಾರ ಎಂಬುವುದು ನಾವೆಲ್ಲರೂ ಒಪ್ಪಿಕೊಳ್ಳಬೇಕಿದೆ.ಆದರೆ ಬೈಲೂರಿನಲ್ಲಿ ಸ್ಥಾಪಿಸಲಾದ ಪರಶುರಾಮ ಪ್ರತಿಮೆ ಅಸಲಿ ಎಂದು ಶಾಸಕರು ಸಾಬೀತುಪಡಿಸಿದ್ದಲ್ಲಿ ಬಹಿರಂಗ ಸಭೆಯಲ್ಲಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತೇನೆ. ಸ್ಥಾಪಿಸಿದ ಪರಶುರಾಮನ ಮೂರ್ತಿ ನಕಲಿಯಾದಲ್ಲಿ ಸುನೀಲ್ ಕುಮಾರ್ ಅವರು ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜಕೀಯದಿಂದ ನಿವೃತ್ತಿ ಪಡೆಯುತ್ತಾರೆಯೇ ಎಂದು ಉದಯ ಶೆಟ್ಟಿ ಸವಾಲು ಹಾಕಿದ್ದಾರೆ. 

ಕಾರ್ಕಳ ತಾಲೂಕು ಎರ್ಲಪ್ಪಾಡಿ ಸರ್ವೇ ನಂಬ್ರ 329/1 ರಲ್ಲಿ 1.58 ಎಕರೆ ಜಮೀನು‌ ಗೋಮಾಳ ಜಮೀನು ಆಗಿರುವ ಹಿನ್ನೆಲೆಯಲ್ಲಿ ಪರಶುರಾಮ ಥೀಮ್ ಪಾರ್ಕ್ ಗೆ ಜಮೀನು ಮಂಜೂರಾತಿ ಸಾಧ್ಯವಿಲ್ಲ ಎಂದು ಜಿಲ್ಲಾಧಿಕಾರಿ ಸ್ಪಷ್ಟಪಡಿಸಿದ್ದರು.

ಈ ವಿಚಾರ ತಿಳಿದಿದ್ದರೂ ಅಂದಿನ ಇಂಧನ ಸಚಿವ ಸುನೀಲ್ ಕುಮಾರ್ ಮೌನಕ್ಕೆ ಶರಣಾಗಿ ಸತ್ಯವನ್ನು ಕ್ಷೇತ್ರದ ನಾಗರಿಕರ ಮುಂದಿಡಲು ಹಿಂಜರಿದಿದ್ದೇಕೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಪ್ರಶ್ನಿಸಿದ್ದಾರೆ.‌

ಯಾವುದೇ ಅನುಮೋದನೆ ಇಲ್ಲದೇ ತರಾತುರಿಯಲ್ಲಿ ಚುನಾವಣೆಯ ವಿಚಾರ ಮುಂದಿಟ್ಟುಕೊಂಡು ಪರಶುರಾಮ ಥೀಮ್ ಪಾರ್ಕ್ ಸ್ಥಾಪನೆಗೆ ಮುಂದಾಗಿರುವ ಶಾಸಕ ಸುನೀಲ್ ಕುಮಾರ್ ಅವರ ದುಡುಕುತನದ ಪ್ರವೃತ್ತಿಯಿಂದಾಗಿ ಅನುದಾನ ಬಿಡುಗಡೆಗೆ ಸರಕಾರ ಮಟ್ಟದಲ್ಲಿ ಅಡೆತಡೆ ಉಂಟಾಗಿದೆಯೇ ಹೊರತು ಕಾಂಗ್ರೆಸ್ ಪಕ್ಷದ ಅಕ್ಷೇಪದಿಂದ ಅಲ್ಲವೆಂದು ಉದಯ ಶೆಟ್ಟಿ ಸ್ಪಷ್ಟಪಡಿಸಿದ್ದಾರೆ. ಸರಕಾರದ ಮಟ್ಟದಲ್ಲಿ ನಿರ್ದೇಶನ ಇದ್ದರೂ ಅನಧಿಕೃತವಾಗಿ ಕಾಮಗಾರಿ ನಡೆಸುತ್ತಾರೆ ಎಂದಾದರೆ ಕಾನೂನಿಗೆ ಮತ್ತು ಸಂವಿಧಾನಕ್ಕೆ ಅಗೌರವ ಸಲ್ಲಿಸಿದಂತಾಗುತ್ತದೆ.

ಕೋಟ್ಯಾಂತರ ವೆಚ್ಚದಲ್ಲಿ ಮೂರ್ತಿ ಸಿದ್ಧಪಡಿಸಿದಾಗ ಯಾವುದೇ ಯೋಜನೆ ಯೋಚನೆ ಇಲ್ಲದೇ ಹೋಗಿರುವುದು ಹಾಗೂ ಪರಶುರಾಮ ಮೂರ್ತಿಯ ರಿಯಾಲಿಟಿ ಚೆಕ್ ನಡೆಸುವಂತೆ ನಾಗರಿಕರಿಂದ ಒತ್ತಡ ಹೆಚ್ಚುತ್ತಿದ್ದಂತೆ ಪರಶುರಾಮ ಮೂರ್ತಿ ಬಲಪಡಿಸುವ ಕುಂಟು ನೆಪ ಮುಂದಿಟ್ಟುಕೊಂಡು ಪರಶುರಾಮ ಮೂರ್ತಿಯನ್ನು ಬದಲಾಯಿಸುವ ಹುನ್ನಾರವನ್ನು ಸುನಿಲ್ ಕುಮಾರ್ ನಡೆಸುತ್ತಿದ್ದಾರೆ ಎಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಗಂಭೀರ ಆರೋಪ ಮಾಡಿದ್ದಾರೆ.‌

ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ಈ ಅಕ್ರಮ ವಿಚಾರವನ್ನು ಗಮನಕ್ಕೆ ತರಲಾಗಿದ್ದು, ಶೀಘ್ರವಾಗಿ ಖುದ್ದು ಸ್ಥಳ ಪರಿಶೀಲಿಸುವ ಭರವಸೆ ನೀಡಿದ್ದಾರೆ. ವಿವಾದಿತ ಪರಶುರಾಮ ಥೀಮ್ ಪಾರ್ಕಿನಲ್ಲಿ ಯಾವುದೇ ಕಾಮಗಾರಿ ನಡೆಸದಂತೆ ಜಿಲ್ಲಾಡಳಿತವೇ ತಡೆ ನೀಡಿದ ಬಳಿಕವೂ ಕಾಮಗಾರಿ ನಡೆಯುತ್ತಿರುವುದು ಅಚ್ಚರಿಯ ವಿಷಯವಾಗಿದೆ. ದೇಶಕ್ಕೆ ಕಾನೂನು ಒಂದಾಗಿದರೆ ಕಾರ್ಕಳಕ್ಕೆ ಮಾತ್ರ ಅದು ಅನ್ವಯ ಆಗುವುದಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.

ಸರಕಾರದಿಂದ ಅನುಮೋದನೆಯಾಗದೇ ವಿವಿಧ ಇಲಾಖೆಗಳ ಅನುದಾನಗಳನ್ನು ದುರುಪಯೋಗಪಡಿಸಿ, ಈ ವಿಚಾರಗಳು ಬಯಲಿಗೆ ಬರುತ್ತಿದ್ದಂತೆಯೇ ಈಯೋಜನೆಯು ತನ್ನದಲ್ಲ, ಕಾರ್ಕಳದ ಜನತೆಯದೆಂದು ಹೇಳಿಕೊಳ್ಳುವ ಮೂಲಕ ಪ್ರಸ್ತುತ ರಾಜ್ಯದಲ್ಲಿ ಅಧಿಕಾರದಲ್ಲಿ ಇರುವ ಕಾಂಗ್ರೆಸ್ ಸರಕಾರದ ವಿರುದ್ಧ ಛೂ ಬಿಡುವ ಪ್ರಯತ್ನವನ್ನು ಶಾಸಕ ಸುನೀಲ್ ಕುಮಾರ್ ಮಾಡುತ್ತಿದ್ದರೆಂದು ಮುನಿಯಾಲು ಉದಯಕುಮಾರ್ ಶೆಟ್ಟಿ ಆರೋಪಿಸಿದ್ದಾರೆ.

Leave a Reply

Your email address will not be published. Required fields are marked *