ಕಾರ್ಕಳ: ಬೈಲೂರಿನ ಉಮಿಕಲ್ ಬೆಟ್ಟದಲ್ಲಿ ಪ್ರತಿಷ್ಠಾಪನೆಯಾಗಿರುವ ಪರಶುರಾಮ ಮೂರ್ತಿಯ ನೈಜತೆ ಕುರಿತು ಈ ಹಿಂದೆ ಸಾಕಷ್ಟು ಗೊಂದಲ ಸೃಷ್ಟಿಯಾಗಿತ್ತು, ಇದೀಗ ಪರಶುರಾಮ ಮೂರ್ತಿಯೇ ನಾಪತ್ತೆಯಾಗಿದ್ದು, ಈ ಯೋಜನೆಯ ಕುರಿತು ಸರ್ಕಾರದ ವತಿಯಿಂದ ಸತ್ಯ ಶೋಧನೆ ಸಮಿತಿ ರಚನೆಯಾಗಬೇಕು ಮಾತ್ರವಲ್ಲದೇ ಈ ಸಮಿತಿಯ ನೇತೃತ್ವದಲ್ಲೇ ಮುಂದಿನ ಕಾಮಗಾರಿ ಪೂರ್ಣಗೊಳ್ಳಬೇಕೆಂದು ಕಾಂಗ್ರೆಸ್ ಮುಖಂಡ ಉದಯ ಶೆಟ್ಟಿ ಮುನಿಯಾಲು ಆಗ್ರಹಿಸಿದ್ದಾರೆ.
ಅವರು ಶನಿವಾರ ಬೈಲೂರಿನ ಉಮಿಕಲ್ ಬೆಟ್ಟದ ಪರಶುರಾಮ ಥೀಮ್ ಪಾರ್ಕಿಗೆ ಭೇಟಿ ನೀಡಿ ಪರಶುರಾಮ ಪ್ರತಿಮೆಯ ನೈಜತೆಯ ಕುರಿತು ಉಂಟಾಗಿರುವ ಗೊಂದಲದ ಕುರಿತು ಮಾತನಾಡಿ, ಪರಶುರಾಮ ದೇವರ ಕುರಿತು ಪದೇಪದೇ ನಡೆಯುತ್ತಿರುವ ವಿವಾದಿಂದ ತುಂಬಾ ಬೇಸರವಾಗುತ್ತಿದೆ. ಸುಮಾರು 15 ಟನ್ ತೂಕದ ಮೂರ್ತಿ ನಿರ್ಮಾಣಕ್ಕೆ ಕನಿಷ್ಟ 2 ವರ್ಷ ಬೇಕಾಗುತ್ತದೆ, ಆದರೆ ಮೂರು ತಿಂಗಳಲ್ಲಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದಾರೆ ಎಂದರೆ ಇದರ ನೈಜತೆಯ ಕುರಿತು ಪ್ರಶ್ನೆ ಮೂಡುವುದು ಸಹಜ ಎಂದರು. ಇದಲ್ಲದೇ ನವೆಂಬರ್ ತಿಂಗಳವರೆಗೆ ಬಾಕಿ ಕಾಮಗಾರಿ ಹಿನ್ನಲೆಯಲ್ಲಿ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ, ಆದರೆ ಈ ಕಾಮಗಾರಿಯನ್ನು ನಿರ್ವಹಿಸಿದ ನಿರ್ಮಿತಿ ಕೇಂದ್ರಕ್ಕೆ ಈ ಯೋಜನೆಯ ತಾಂತ್ರಿಕ ಅನುಭವವೇ ಇಲ್ಲ, ಕೇವಲ 15 ಟನ್ ಮೂರ್ತಿ ಪ್ರತಿಷ್ಟಾಪಿಸಲು ಅಡಿಪಾಯ ಭದ್ರವಾಗಿಲ್ಲ ಎನ್ನುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು ಹೇಳಿಕೆ ನೀಡಿರುವುದು ನಿಜಕ್ಕೂ ದುರಂತವೇ ಸರಿ, ಆದ್ದರಿಂದ ಈ ಯೋಜನೆಯ ಹೊಣೆಯನ್ನು ಸರ್ಕಾರ ಬೇರೆ ಏಜೆನ್ಸಿಗೆ ವರ್ಗಾಯಿಸಬೇಕೆಂದು ಉದಯ ಶೆಟ್ಟಿ ಆಗ್ರಹಿಸಿದ್ದಾರೆ.
ಈ ಯೋಜನೆಯ ಬಾಕಿ ಕಾಮಗಾರಿ ಮುಗಿಸಲು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಶಾಸಕರನ್ನು ಸೇರಿಸಿಕೊಂಡು ಸತ್ಯಶೋಧನಾ ಸಮಿತಿ ರಚನೆಯಾಬೇಕು, ಮಾತ್ರವಲ್ಲದೇ ಈ ಯೋಜನೆಗೆ ಬೇಕಾದ ಅಡಿಪಾಯವನ್ನು ಎನ್ ಐ ಟಿ ಕೆ ಅಥವಾ ಎಂಐಟಿ ಯ ಪರಿಣಿತರ ತಂಡ ನಿರ್ಮಿಸಿ ಕಂಚಿನ ವಿಗ್ರಹ ಪ್ರತಿಷ್ಠಾಪನೆಯಾಗಬೇಕು ಅ ಮೂಲಕ ಈ ಐತಿಹಾಸಿಕ ಪರಶುರಾಮ ಥೀಂ ಪಾರ್ಕ್ ಪ್ರವಾಸಿ ಕೇಂದ್ರ ಹಾಗೂ ಭಕ್ತರ ಧಾರ್ಮಿಕ ಕೇಂದ್ರವಾಗಬೇಕು, ಮಾತ್ರವಲ್ಲದೇ ಜನರು ಅಧಿಕ ಸಂಖ್ಯೆಯಲ್ಲಿ ಬರುವಂತಾಗಬೇಕು ಹಾಗೂ ಬೈಲೂರು ಪ್ರವಾಸಿ ಕೇಂದ್ರವಾಗಿ ಬೆಳೆಯಬೇಕೆನ್ನುವುದೇ ನಮ್ಮ ಆಶಯವಾಗಿದೆ ಎಂದು ಉದಯ ಶೆಟ್ಟಿ ಹೇಳಿದರು