ತುಮಕೂರು: ಗೃಹ ಸಚಿವ ಪರಮೇಶ್ವರ್ ಕ್ಷೇತ್ರದಲ್ಲೇ ಪರಿಶಿಷ್ಟರ ಅಂತ್ಯ ಸಂಸ್ಕಾರದ ಚೆಕ್ ಬೌನ್ಸ್ ಆಗಿದೆ. ಅಷ್ಟರಮಟ್ಟಿಗೆ ಸರ್ಕಾರ ದಿವಾಳಿಯಾಗಿದೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಆರೋಪಿಸಿದ್ದಾರೆ.
ರಾಜ್ಯದಲ್ಲಿ ಮಳೆ ಕೊರತೆಯಿಂದಾಗಿ ಬರ ಆವರಿಸಿರುವ ವೇಳೆ ಸರ್ಕಾರ ಸರಿಯಾದ ಪರಿಹಾರ ಕಾರ್ಯ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ
ತುಮಕೂರಿನ ಕೆಎಸ್ಎಫ್ ಸಿ ಆವರಣದಲ್ಲಿ ನಡೆಯುತ್ತಿರುವ ಕೈಗಾರಿಕೋದ್ಯಮಿಗಳ ಸಂವಾದ ಮತ್ತು ಬಳಿಕ ಸುದ್ದಿಗಾರರ ಜೊತೆ ಮಾತನಾಡಿದ ಬಿಎಸ್ ವೈ, ಜನರಿಗೆ ಈಡೇರಿಸಲಾಗದ ಅನಗತ್ಯ ಉಚಿತ ಭಾಗ್ಯ ಕೊಟ್ಟು ಸರ್ಕಾರ ದಿವಾಳಿಯಾಗುತ್ತಿದೆ.ಇದರಿಂದ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಸ್ಥಗಿತಗೊಂಡಿವೆ. ರಾಜ್ಯ ಸರ್ಕಾರದ ಅನುದಾನವನ್ನು ದುಂದುವೆಚ್ಚಕ್ಕೆ ಬಳಸಿಕೊಂಡು
ಬರ ಪರಿಹಾರಕ್ಕೆ ಕೇಂದ್ರ ಸರ್ಕಾರ ಅನುದಾನ ನೀಡಿಲ್ಲ ಎಂದು ಆರೋಪ ಮಾಡಿರುವ ರಾಜ್ಯ ಸರ್ಕಾರದ ವಿರುದ್ಧ ಅವರು ಕೆಂಡಕಾರಿದರು. ಕೇಂದ್ರ ತಂಡ ಬರ ಅಧ್ಯಯನ ನಡೆಸಿದೆ. ಕೇಂದ್ರ ಪರಿಹಾರ ಕೊಟ್ಟೆ ಕೊಡುತ್ತದೆ, ನಾವು ಅಧಿಕಾರದಲ್ಲಿದ್ದಾಗ ಅತಿವೃಷ್ಟಿ ಹಾಗೂ ಅನಾವೃಷ್ಟಿ ಸಂಭವಿಸಿದೆ,ಆದರೆ ಕೇಂದ್ರ ಸರ್ಕಾರ ಅನುದಾನ ಕೊಡಲಿ ಎಂದು ನಾವು ಕಾಯದೇ ತಕ್ಷಣವೇ ಅನುದಾನ ಬಿಡುಗಡೆ ಮಾಡಿ, ಆನಂತರ ಕೇಂದ್ರ ಕೊಟ್ಟಾಗ ಸರಿದೂಗಿಸಿಕೊಳ್ಳುತ್ತಿದ್ದೆವು ಎಂದರು.
ತುಮಕೂರು ಜಿಲ್ಲೆಯಲ್ಲಿ ಇಬ್ಬರು ಸಚಿವರು ಇದ್ದರೂ ಕೈಗಾರಿಕೋದ್ಯಮಿಗಳ ಸಮಸ್ಯೆ ಆಲಿಸಿಲ್ಲ. ಬರ ವೀಕ್ಷಣೆ ಮಾಡಿಲ್ಲ, ಅನಗತ್ಯ ಉಚಿತ ಭಾಗ್ಯ ಕೊಟ್ಟು ಸರ್ಕಾರ ದಿವಾಳಿಯಾಗುತ್ತಿದೆ. ವಿದ್ಯುತ್ ಕಣ್ಣಾಮುಚ್ಚಾಲೆ, ತೆರಿಗೆ ಜಾಸ್ತಿ ಮಾಡಿ ಸಂಕಷ್ಟ ತಂದಿದ್ದಾರೆ. ವಿದ್ಯುತ್ ದರ ಹೆಚ್ಟಾಗಿ ಸಣ್ಣ ಕೈಗಾರಿಕೆಗಳು ನೆಲ ಕಚ್ಚಿವೆ. ಸಂಬಂಧಪಟ್ಟವರ ಜೊತೆ ಮಾತನಾಡಿ ಸಮಸ್ಯೆ ಬಗೆಹರಿಸುವ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.
ತುಮಕೂರು ಕೈಗಾರಿಕೆಯಲ್ಲಿ ಬಹಳಷ್ಟು ಅಭಿವೃದ್ಧಿ ಆಗುತ್ತಿದೆ. ಚೇಂಬರ್ ಆಫ್ ಕಾಮರ್ಸ್ ಮುಖಂಡರು ಜ್ವಲಂತ ಸಮಸ್ಯೆಗಳನ್ನ ಗಮನಕ್ಕೆ ತಂದಿದ್ದಾರೆ. ವಿದ್ಯುತ್ ಅಭಾವ ,ಕುಡಿಯುವ ನೀರಿನ ಸಮಸ್ಯೆ, ದುಡಿಯುವ ಕೈಗಳಿಗೆ ಕೆಲಸ ಇಲ್ಲ.ತುಮಕೂರು ಜಿಲ್ಲೆಯ ಇಬ್ಬರೂ ಸಚಿವರು ಸಮಸ್ಯೆ ತಿಳಿದುಕೊಂಡು ಸ್ಥಳದಲ್ಲೇ ಬಗೆಹರಿಸುವ ಕೆಲಸ ಮಾಡಬೇಕಿತ್ತು. ಸರ್ಕಾರ ಬದಕಿದ್ದು ಸತ್ತಂತಿದೆ. ನಾನೇ ಖುದ್ದಾಗಿ ಬಂದು ಸಮಸ್ಯೆ ಆಲಿಸಿದ್ದೇವೆ ಎಂದರು.
ನಾವು ಬರ ಅಧ್ಯಯನ ಮಾಡ್ತಿವಿ ಅಂದಾಗ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಅವರು ಹಗುರವಾಗಿ ಮಾತಾಡಿದ್ದಾರೆ. ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೈಗಾರಿಕೆಗಳು ಮುಚ್ಚುವ ಹಂತಕ್ಕೆ ಬಂದಿವೆ. ಮತ್ತೊಂದು ಕಡೆ ವಿದ್ಯುತ್ ಬೆಲೆ ಏರಿಕೆ ಮಾಡಿದ್ದಾರೆ. ಎಲ್ಲಾ ಸಮಸ್ಯೆಗಳಿಗೆ ಸರ್ಕಾರ ಪರಿಹಾರ ಹುಡುಕುವ ಪ್ರಯತ್ನ ಮಾಡಬೇಕು. ಇಲ್ಲವಾದರೆ ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತೆ. ಈ ಬಗ್ಗೆ ಸಿಎಂ, ಡಿಸಿಎಂ ಗೆ ಎಚ್ಚರಿಕೆ ನೀಡುತ್ತಿದ್ದೇವೆ ಎಂದರು.