ಬಾಗಲಕೋಟೆ: 9ನೇ ತರಗತಿ ವಿದ್ಯಾರ್ಥಿಯೊಬ್ಬ ಪರೀಕ್ಷೆ ಬರೆಯುತ್ತಿದ್ದ ವೇಳೆಯೇ ಹೃದಯಾಘಾತದಿಂದ ಕುಸಿದುಬಿದ್ದು ಸಾವನ್ನಪ್ಪಿದ ದಾರುಣ ಘಟನೆ ಬಾಗಲಕೋಟೆ ಜಿಲ್ಲೆಯ ಜಮಖಂಡಿ ತಾಲೂಕಿನ ಹುಲ್ಯಾಳ ಗ್ರಾಮದಲ್ಲಿ ನಿನ್ನೆ(ಶುಕ್ರವಾರ) ನಡೆದಿದೆ.
ರಾಹುಲ್ ವಿಠ್ಠಲ್ (15) ಎಂಬಾತ ಹೃದಯಾಘಾತದಿಂದ ಸಾವಿಗೀಡಾದ ವಿದ್ಯಾರ್ಥಿಯಾಗಿದ್ದಾನೆ. ಮೃತ ರಾಹುಲ್ ಜಮಖಂಡಿ ತಾಲೂಕಿನ ಹಂಚಿನಾಳ ಗ್ರಾಮದ ನಿವಾಸಿಯಾಗಿದ್ದಾನೆ.ಹುಲ್ಯಾಳ ಗ್ರಾಮದ ಖಾಸಗಿ ಪ್ರೌಢಶಾಲೆಯಲ್ಲಿ 9ನೇ ತರಗತಿ ವ್ಯಾಸಂಗ ಮಾಡುತ್ತಿದ್ದ ರಾಹುಲ್ ಗೆ ಅರ್ಧ ವಾರ್ಷಿಕ ಪರೀಕ್ಷೆ ಬರೆಯುತ್ತಿದ್ದ ವೇಳೆ ತೀವ್ರ ಎದೆ ನೋವು ಕಾಣಿಸಿಕೊಂಡಿದೆ. ತಕ್ಷಣವೇ ಆತನನ್ನು ಜಮಖಂಡಿ ನಗರದ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗದಲ್ಲಿಯೇ ರಾಹುಲ್ ಹೃದಯಾಘಾತದಿಂದ ಕೊನೆಯುಸಿರೆಳೆದಿದ್ದಾನೆ.ಮೃತ ವಿದ್ಯಾರ್ಥಿ ರಾಹುಲ್ ವಿಠ್ಠಲಗೆ ಹೃದಯಸಂಬಂಧಿ ಕಾಯಿಲೆ ಇತ್ತು ಎನ್ನಲಾಗಿದೆ.
ವಿದ್ಯಾರ್ಥಿ ರಾಹುಲ್ ಸಾವಿನ ಸುದ್ದಿ ತಿಳಿದು ಶಾಲಾ ಶಿಕ್ಷಕರು, ವಿದ್ಯಾರ್ಥಿಗಳು ಕಂಬನಿ ಮಿಡಿದಿದ್ದಾರೆ.