ನವದೆಹಲಿ: ಭಯೋತ್ಪಾದಕ ಕೃತ್ಯಗಳಿಗೆ ಕುಮ್ಮಕ್ಕು, ಹಣಕಾಸು ನೆರವು ನೀಡಿದ ಆರೋಪದಲ್ಲಿ ಕಳೆದ ವರ್ಷ ಕೇಂದ್ರ ಸರ್ಕಾರದಿಂದ ನಿಷೇಧಕ್ಕೆ ಒಳಗಾದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಈಗಲೂ ಕರ್ನಾಟಕದಲ್ಲಿ ಸಕ್ರಿಯವಾಗಿದೆ. ಅದು ಸೋಷಿಯಲ್ ಡೆಮಾಕ್ರೆಟಿಕ್ ಪಾರ್ಟಿ ಆಫ್ ಇಂಡಿಯಾ ರಾಜಕೀಯ ಪಕ್ಷದ ಹೆಸರಿನಲ್ಲಿ ಮಾರುವೇಷದಲ್ಲಿ ಕಾರ್ಯಾಚರಣೆ ನಡೆಸುತ್ತಿದೆ ಎಂದು ಖಾಸಗಿ ಸುದ್ದಿವಾಹಿನಿ ನಡೆಸಿದ ರಹಸ್ಯ ಕಾರ‍್ಯಾಚರಣೆಯಲ್ಲಿ ಬೆಳಕಿಗೆ ಬಂದಿದೆ.
ಪಿಎಫ್‌ಐ ಮೇಲಿನ ನಿಷೇಧ ನಮ್ಮ ಮೇಲೆ ಯಾವುದೇ ಪರಿಣಾಮ ಬೀರಿಲ್ಲ. ಎಲ್ಲ ಪಿಎಫ್‌ಐ ಕಾರ್ಯಕರ್ತರು, ಎಸ್‌ಡಿಪಿಐ ಸೇರಿಕೊಂಡು ಅಲ್ಲಿಂದಲೇ ಹಳೆಯ ಕೆಲಸಗಳನ್ನು ಮುಂದುವರಿಸಿದ್ದೇವೆ ಎಂದು ರಹಸ್ಯ ಕಾರ‍್ಯಾಚರಣೆಯಲ್ಲಿ ಸೆರೆ ಸಿಕ್ಕಿರುವ ಕರ್ನಾಟಕದ ಕೆಲವು ಈಗಿನ ಎಸ್‌ಡಿಪಿಐ ನಾಯಕರು (ಅಂದಿನ ಪಿಎಫ್‌ಐ ಮುಖಂಡರು) ಹೇಳಿದ್ದಾರೆ.
ಪಿಎಫ್‌ಐ ನಂಟಿನ ಎಸ್‌ಡಿಪಿಐ ನಿಷೇಧ ಮಾಡುತ್ತೀರಾ ಎಂದು ಕಳೆದ ಅಕ್ಟೋಬರ್‌ನಲ್ಲಿ ಪತ್ರಕರ್ತರು ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್‌ರನ್ನು ಪ್ರಶ್ನಿಸಿದ್ದರು. ಆದರೆ ಇವುಗಳ ನಡುವಿನ ನಂಟಿನ ಬಗ್ಗೆ ಸಾಕ್ಷ್ಯವಿಲ್ಲ. ಪಿಎಫ್‌ಐ ಒಂದು ಸಂಸ್ಥೆ. ಸರ್ಕಾರ ನಿಷೇಧಿಸಿದೆ. ಆದರೆ ಎಸ್‌ಡಿಪಿಐ ರಾಜಕೀಯ ಪಕ್ಷ. ಎಲ್ಲ ಅಗತ್ಯ ದಾಖಲೆ ಕೊಟ್ಟು ಎಸ್‌ಡಿಪಿಐ ನೋಂದಾಯಿತ ರಾಜಕೀಯ ಪಕ್ಷವಾಗಿದೆ ಎಂದಿದ್ದರು. ಆದರೆ ಇದೀಗ ಪಿಎಫ್‌ಐ-ಎಸ್‌ಡಿಪಿಐ ನಂಟಿನ ಮಾಹಿತಿ ಹೊರಬಿದ್ದಿದೆ ಎಮದು ಸುದ್ದಿವಾಹಿನಿ ಹೇಳಿದೆ.
ನಿಷೇಧಕ್ಕೂ 3 ವರ್ಷ ಮುನ್ನ ಪಿಎಫ್‌ಐ ಚಿಕ್ಕಮಗಳೂರು ಜಿಲ್ಲಾ ಅಧ್ಯಕ್ಷನಾಗಿದ್ದ ಚಾಂದ್ ಪಾಷಾ ರಹಸ್ಯ ಕ್ಯಾಮರಾ ಮುಂದೆ ಮಾತನಾಡಿ, ನಾವು ಪಿಎಫ್‌ಐ ಮನುಷ್ಯರು. ನಾನು ಗ್ರೌಂಡ್ ವರ್ಕ್ ನಡೆಸಿ ಕಾರ್ಯಕರ್ತರನ್ನು ಒಗ್ಗೂಡಸುತ್ತಿದ್ದೇನೆ. ವಾಟ್ಸಾಪ್‌ನಲ್ಲಿ ಸೂಚನೆಗಳುಳ್ಳ ವಿಡಿಯೋಗಳನ್ನು ಕಳಿಸಿದರೆ ಸಾವಿರಾರು ಮಂದಿ ನೋಡುತ್ತಾರೆ. ನಾವೇನೂ ವ್ಯಕ್ತಿಗತವಾಗಿ ಭೇಟಿ ಆಗಲೇಬೇಕು ಎಂದೇನಿಲ್ಲ. ಈ ಕರೆಗಳ ಮೂಲಕ ಮುಸ್ಲಿಂ ಮತದಾರರಲ್ಲಿ ಮನವಿಗಳನ್ನು ಮಾಡುತೇವೆ. ಪಿಎಫ್‌ಐನ ಹಿತೈಷಿಗಳು, ಕಾರ್ಯಕರ್ತರು ಇನ್ನೂ ಇದ್ದಾರೆ. ಗೆಲ್ಲುವ ಅಭ್ಯರ್ಥಿಗಳ ಬಗ್ಗೆ ಚರ್ಚೆ ಮಾಡುತ್ತೇವೆ. ಬಿಜೆಪಿ ಸೋಲಿಸುವುದೇ ನಮ್ಮ ಗುರಿ ಎಂದು ಹೇಳಿದ್ದಾನೆ ಎಂದು ವರದಿ ಹೇಳಿದೆ.
ಪಾಷಾನ ಹೇಳಿಕೆಗಳನ್ನು ದಕ್ಷಿಣ ಕನ್ನಡ ಜಿಲ್ಲೆ ಮೂಡಬಿದಿರೆಯ ಎಸ್‌ಡಿಪಿಐ ಪ್ರಬಾರಿ ಆಸಿಫ್ ಅನುಮೋದಿಸಿದ್ದಾನೆ. ಆಫ್ ದ ರೆಕಾರ್ಡ್ ಹೇಳುತ್ತಿದ್ದೇನೆ. ಪಿಎಫ್‌ಐನ ಸದಸ್ಯರೆಲ್ಲ ಈಗ ಎಸ್‌ಡಿಪಿಐನಲ್ಲಿದ್ದಾರೆ. ಎಲ್ಲರೂ ತೆರೆಮರೆಯಲ್ಲಿ ಕೆಲಸ ಮಾಡುತ್ತಾರೆ. ಬಂಧಿಸಲು ಸಾಧ್ಯವೇ ಇಲ್ಲ. ಏಕೆಂದರೆ ಸಾಕ್ಷ್ಯವಿಲ್ಲ. ಏಕೆಂದರೆ ನಾನು ಪಿಎಫ್‌ಐನಲ್ಲಿದ್ದೇನೆ ಎಂಬುದಕ್ಕೆ ಯಾವುದೇ ದಾಖಲೆ ಇಲ್ಲ. ಏಕೆಂದರೆ ಪಿಎಫ್‌ಐನಲ್ಲಿ ಐಡಿ ಕಾರ್ಡ್ ಕೊಡುವ ಪದ್ಧತಿಯೇ ಇಲ್ಲ ಎಂದು ಹೇಳಿದ್ದಾನೆ.
ಪಿಎಫ್‌ಐ-ಎಸ್‌ಡಿಪಿಐ ಒಂದಾಗಿರುವ ಕಾರಣ ನಮ್ಮ ಸಂಘಟನೆ ಆರೆಸ್ಸೆಸ್‌ನಷ್ಟೆ ಬಲವಾಗಿದೆಎಂದಿದ್ದಾನೆ ಎಂದು ರಹಸ್ಯ ಕರ‍್ಯಾಚರಣೆ ವರದಿ ಮಾಡಿದೆ. ಉಡುಪಿಯ ಎಸ್‌ಡಿಪಿಐ ಪದಾಧಿಕಾರಿ ನಾಸಿರ್ ಪ್ರತಿಕ್ರಿಯಿಸಿ, ಪಿಎಫ್‌ಐ ಕಾರ್ಯಕರ್ತರೇನೂ ನಡುಗಿ ಹೋಗಿಲ್ಲ. ಕಾರ್ಯಕರ್ತರೇನೂ ಸುಮ್ಮನೇ ಹೋಗಲ್ಲ. ತರಬೇತಿ ಇಲ್ಲದ ಯುವಕರು ಹೆದರುತ್ತಾರೆ. ಆದರೆ ನಾವು ಸಂಪೂರ್ಣ ತರಬೇತಿ ಪಡೆದಿದ್ದೇವೆ. ನಾವು ಈಗ ಎಸ್‌ಡಿಪಿಐನಲ್ಲಿದ್ದೇವೆ. ನಮ್ಮ ಕಾರ್ಯಕರ್ತರು ಯಾರ ಮೇಲೂ ದಾಳಿ ಮಾಡಲ್ಲ. ಆದರೆ ಪಿಎಫ್‌ಐ ಬಗ್ಗೆ ಎಲ್ಲರಿಗೂ ಹೆದರಿಕೆ ಇದೆ ಎಂದು ಹೇಳಿದ್ದಾನೆಂದು ವರದಿ ವಿವರಿಸಿದೆ.