ನವದೆಹಲಿ: ಕರ್ನಾಟಕದ ಪದವಿಪೂರ್ವ ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳನ್ನು ತಲೆಯ ಸ್ಕಾರ್ಫ್ ನೊಂದಿಗೆ ಬರೆಯಲು ಅನುಮತಿ ಕೋರಿ ವಿದ್ಯಾರ್ಥಿಗಳ ಗುಂಪು ಸಲ್ಲಿಸಿದ್ದ ಅರ್ಜಿಯ ವಿಚಾರಣೆಯನ್ನು ಪರಿಶೀಲಿಸಲು ಸುಪ್ರೀಂ ಕೋರ್ಟ್ ಒಪ್ಪಿಗೆ ನೀಡಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ನ್ಯಾಯಮೂರ್ತಿ ಪಿ.ಎಸ್.ನರಸಿಂಹ ಅವರ ಪೀಠವು ಪಟ್ಟಿಗಾಗಿ ಮನವಿಯನ್ನು ಪರಿಶೀಲಿಸಲಾಗುವುದು ಎಂದು ಹೇಳಿದೆ.
ವಿದ್ಯಾರ್ಥಿಗಳ ಪರವಾಗಿ ವಕೀಲ ಶಾದನ್ ಫರಾಸತ್ ಅವರು ಮಾರ್ಚ್ 9 ರಿಂದ ಸರ್ಕಾರಿ ಕಾಲೇಜುಗಳಲ್ಲಿ ಪ್ರಾರಂಭವಾಗುವ ವಾರ್ಷಿಕ ಪರೀಕ್ಷೆಗಳಿಗೆ ಹಾಜರಾಗಬೇಕಾಗಿತ್ತು. ಅವರು ಹಿಜಾಬ್ ನೊಂದಿಗೆ ಪರೀಕ್ಷೆಗಳಿಗೆ ಹಾಜರಾಗಲು ಅನುಮತಿ ಬಯಸಿದ್ದರು. ವಿದ್ಯಾರ್ಥಿಗಳು ಈಗಾಗಲೇ ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ ಮತ್ತು ಯಾವುದೇ ಪರಿಹಾರವನ್ನು ನೀಡದಿದ್ದರೆ, ಅವರು ಮತ್ತೊಂದು ವರ್ಷವನ್ನು ಕಳೆದುಕೊಳ್ಳುತ್ತಾರೆ ಎಂದು ಅವರು ಹೇಳಿದರು.
ಈ ಎಲ್ಲಾ ವಿದ್ಯಾರ್ಥಿಗಳು ಈಗಾಗಲೇ ಖಾಸಗಿ ಕಾಲೇಜುಗಳಿಗೆ ಸ್ಥಳಾಂತರಗೊAಡಿದ್ದಾರೆ. ಆದರೆ ಅವರು ಪರೀಕ್ಷೆಗಳಿಗೆ ಹಾಜರಾಗಲು ಸರ್ಕಾರಿ ಕಾಲೇಜುಗಳಿಗೆ ಹೋಗಬೇಕಾಗಿದೆ ಎಂದರು
ಇದಕ್ಕೆ ಉತ್ತರಿಸಿದ ಡಿ. ವೈ. ಚಂದ್ರಚೂಡ್ ಅವರು ನಾನು ಈ ಬಗ್ಗೆ ಶೀಘ್ರದಲ್ಲೇ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.
ಶಾಲಾ ಆಡಳಿತ ಮಂಡಳಿ ಅನುಮೋದಿಸಿದ ಸಮವಸ್ತ್ರವನ್ನು ಮಾತ್ರವೇ ವಿದ್ಯಾರ್ಥಿಗಳು ಧರಿಸಬಹುದಾಗಿದ್ದು, ಇತರೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕಾಲೇಜುಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಪಿಯು ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತ್ತು. ನಂತರ ಈ ವಿಚಾರ ಕರ್ನಾಟಕ ಹೈಕೋರ್ಟ್ ಮೆಟ್ಟಿಲೇರಿದ್ದು, ಅಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವುದನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ವಜಾಗೊಳಿಸಿತು ಮತ್ತು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೈಕೋರ್ಟ್ ಹೇಳಿತ್ತು.
ಆದರೆ, ಈ ವಿಚಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋದಾಗ ಅಕ್ಟೋಬರ್ 13, 2022 ರಂದು ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ದ್ವಿಸದಸ್ಯ ಪೀಠ ವಿಭಜಿತ ತೀರ್ಪು ಪ್ರಕಟಿಸಿತ್ತು. ಇದರಿಂದ ಕರ್ನಾಟಕ ಸರ್ಕಾರದ ಹಿಜಾಬ್ ನಿಷೇಧ ಪ್ರಸ್ತುತ ಜಾರಿಯಲ್ಲಿದೆ.