ಮಂಗಳೂರು:ಕರಾವಳಿಯ ಹಿಂದೂ ಕಾರ್ಯಕರ್ತರ ಮೇಲೆ ಗಡಿಪಾರು ಅಸ್ತ್ರ ಪ್ರಯೋಗಕ್ಕೆ ಪೊಲೀಸ್ ಇಲಾಖೆ ಸಜ್ಜಾಗಿದೆ. ನೈತಿಕ ಪೊಲೀಸ್‌ಗಿರಿ, ಕೋಮುಗಲಭೆ, ದನ ಸಾಗಾಟ ಮತ್ತು ಇತರ ಪ್ರಕರಣಗಳಲ್ಲಿ ಭಾಗಿಯಾಗಿರುವ ನಿಮ್ಮನ್ನು ಯಾಕೆ ಗಡಿಪಾರು ಮಾಡಬಾರದು ಎಂದು ಕೇಳಿ ಪುತ್ತೂರಿನ ಐವರು ಬಜರಂಗ ದಳ ಕಾರ್ಯಕರ್ತರಿಗೆ ಪೊಲೀಸ್ ಇಲಾಖೆ ನೋಟಿಸ್ ಜಾರಿಗೊಳಿಸಿದೆ.
ಭಜರಂಗದಳದ ಕಾರ್ಯಕರ್ತರಾದ ಲತೇಶ್ ಗುಂಡ್ಯ, ಪ್ರಜ್ವಲ್, ನಿಶಾಂತ್, ಪ್ರದೀಪ್ ಮತ್ತು ದಿನೇಶ್ ಗೆ ನೋಟೀಸ್ ಜಾರಿಯಾಗಿದ್ದು, ನವೆಂಬರ್ 22ರಂದು ಪುತ್ತೂರು ಸಹಾಯಕ ಆಯುಕ್ತರ ಎದುರು ಹಾಜರಾಗಲು ಸೂಚನೆ ನೀಡಲಾಗಿದೆ.
ಲತೇಶ್ ಗುಂಡ್ಯ ಬಜರಂಗ ದಳ ಪುತ್ತೂರು ಜಿಲ್ಲಾ ಸಹ ಸಂಯೋಜಕ್ ಆಗಿದ್ದರೆ, ದಿನೇಶ್ ಮತ್ತು ಪ್ರಜ್ವಲ್‌ಗೆ ಬಜರಂಗ ದಳದಲ್ಲಿ ಪುತ್ತೂರು ತಾಲೂಕು ಪದಾಧಿಕಾರಿಯಾಗಿದ್ದಾರೆ, ಉಳಿದ ಇಬ್ಬರಾದ ನಿಶಾಂತ್ ಮತ್ತು ಪ್ರದೀಪ್ ಕಾರ್ಯಕರ್ತರಾಗಿದ್ದು, ಅವರ ವಿರುದ್ಧವೂ ಗಡಿಪಾರು ಅಸ್ತ್ರ ಪ್ರಯೋಗ ನಡೆದಿದೆ.
ನೋಟಿಸ್ ಪಡೆದ ಐವರಲ್ಲಿ ಲತೇಶ್ ಹೊರತುಪಡಿಸಿ ಉಳಿದ ನಾಲ್ವರ ಮೇಲೆ ಒಂದೊಂದೇ ಪ್ರಕರಣಗಳಿವೆ. ಕೋಮು ಗಲಭೆ, ದನ ಸಾಗಾಟದ ವೇಳೆ ಹಲ್ಲೆ, ನೈತಿಕ ಪೊಲೀಸ್ ಗಿರಿ ಸೇರಿ ಪ್ರಕರಣಗಳಲ್ಲಿ ಭಾಗಿಯಾದ ಆರೋಪಗಳಿವೆ.
ಇವರು ಪುತ್ತೂರು ನಗರ ಮತ್ತು ಸುಳ್ಯ ಠಾಣೆ ವ್ಯಾಪ್ತಿಗೆ ಸೇರಿದವರಾಗಿದ್ದಾರೆ. ಲತೇಶ್ ಅವರನ್ನು ಬಳ್ಳಾರಿ ಜಿಲ್ಲೆಗೆ ಗಡಿಪಾರು ಮಾಡಲು ಸೂಚಿಸಲಾಗಿದೆ. ಪ್ರಜ್ವಲ್ ಅವರನ್ನು ಬಾಗಲಕೋಟೆ ಜಿಲ್ಲೆಗೆ ಗಡಿಪಾರು ಮಾಡಲು ಮನವಿ ಮಾಡಲಾಗಿದೆ.
ಕರ್ನಾಟಕ ಪೊಲೀಸ್ ಅಧಿನಿಯಮ 1953ರ ಕಲಂ 55ರಡಿ ಗಡಿಪಾರು ನೋಟೀಸ್ ನೀಡಲಾಗಿದ್ದು, ವಿಚಾರಣೆಗೆ ಹಾಜರಾದ ಬಳಿಕ ಅಧಿಕೃತವಾಗಿ ಒಂದು ವರ್ಷಗಳ ಕಾಲ ಜಿಲ್ಲೆಯಿಂದ ಗಡಿಪಾರು ಮಾಡುವ ಸಾಧ್ಯತೆಗಳಿವೆ. ಕಳೆದ ಜುಲೈನಲ್ಲಿ ಮಂಗಳೂರಿನ ಮೂವರು ಭಜರಂಗದಳ ಕಾರ್ಯಕರ್ತರ ಮೇಲೆ ಗಡೀಪಾರು ಅಸ್ತ್ರ ಪ್ರಯೋಗಿಸಲಾಗಿತ್ತು. ಆದರೆ ಬಜರಂಗ ದಳ ಸಂಘಟನೆ ನ್ಯಾಯಾಲಯದ ಮೆಟ್ಟಿಲೇರಿ ತಡೆಯಾಜ್ಞೆ ತಂದಿತ್ತು.
ಹಿಂದೂ ಸಂಘಟನೆ ಕಾರ್ಯಕರ್ತರ ಗಡಿಪಾರಿಗೆ ಸಂಬಂಧಿಸಿ ನೋಟಿಸ್ ಜಾರಿಗೊಳಿಸಿದ್ದನ್ನು ಬಿಜೆಪಿಯ ಮಾಜಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಖಂಡಿಸಿದ್ದಾರೆ.ಈ ಕುರಿತು ಪುತ್ತೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್ ಸರ್ಕಾರದ ಕ್ರಮದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಸಂಘಟನೆಯ ಕಾರ್ಯಕರ್ತರನ್ನು ಗುರಿ ಮಾಡಲಾಗುತ್ತಿದೆ. ಸುಳ್ಯ ಹಾಗು ಪುತ್ತೂರು ಭಾಗದ ಕಾರ್ಯಕರ್ತರ ಮೇಲೆ ಗಡಿಪಾರಿನ ಆದೇಶ ಹೊರಡಿಸಲಾಗಿದೆ. ಯಾವುದೇ ಅಪರಾಧವಿಲ್ಲದಿದ್ದರೂ, ಸುಳ್ಳು ಪ್ರಕರಣ ದಾಖಲು ಮಾಡಲಾಗುತ್ತಿದೆ. ಒಂದೇ ಒಂದು ಕೇಸ್ ಇಲ್ಲದವರನ್ನು ಗಡಿಪಾರು ಮಾಡಲಾಗುತ್ತಿದೆ ಎಂದು ಪೊಲೀಸ್ ಇಲಾಖೆಯ ವಿರುದ್ಧ ಹರಿಹಾಯ್ದರು.
ಕಾಂಗ್ರೆಸ್ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಸಿದ್ದರಾಮಯ್ಯ ಮುಖ್ಯಮಂತ್ರಿ ಆದ ಬಳಿಕ ಗೋಹತ್ಯೆ, ರೈತರ ಆತ್ಮಹತ್ಯೆ, ಗೂಂಡಾಗಳ ಹಾವಳಿ ಹೆಚ್ಚಾಗಿದೆ. ಸಾಲು ಸಾಲು ಹತ್ಯೆಗಳೂ ರಾಜ್ಯದಲ್ಲಿ ನಡೆಯುತ್ತಿವೆ. ರಾಜ್ಯದಲ್ಲಿ ಗೂಂಡಾಗಳಿಗೆ ಹೆಚ್ಚಿನ ಲಾಭ ಆಗಿದೆ. ಕರ್ನಾಟಕ ಇಂದು ಗೂಂಡಾರಾಜ್ಯವಾಗಿ ಬದಲಾಗಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಆರೋಪಿಸಿದ್ದಾರೆ.