ವಿಜಯನಗರ: ರಾಜ್ಯದಲ್ಲಿ ಮುಂದಿನ 5 ವರ್ಷಗಳ ಅವಧಿಗೆ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತೇನೆ. ಕೆಲಸ ಇಲ್ಲದವರು ಮುಖ್ಯಮಂತ್ರಿ ಬದಲಾವಣೆ ಕುರಿತು ವಿನಾಕಾರಣ ಮಾತನಾಡುತ್ತಿದ್ದಾರೆ ಎಂದು ಸ್ವಪಕ್ಷೀಯರ ವಿರುದ್ಧವೇ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಐದು ವರ್ಷ ನಮ್ಮದೇ ಸರ್ಕಾರ ನಾನು ಈಗ ಮುಖ್ಯಮಂತ್ರಿ,ಮುಂದಿನ ಐದು ವರ್ಷಗಳ ಕಾಲ ನಾನೇ ಮುಖ್ಯಮಂತ್ರಿಯಾಗಿ ಮುಂದುವರೆಯುವೆ.ಕೆಲಸ ಇಲ್ಲದೇ ಇರುವವರು ಮಾತ್ರ ಮುಖ್ಯಮಂತ್ರಿ ಬದಲಾವಣೆ ವಿಚಾರ ಮಾತನಾಡ್ತಾರೆ. ನಮ್ಮ ಸರ್ಕಾರ ಸುಭದ್ರವಾಗಿದೆ. ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿ ಮಾಡೋದು ಹೈಕಮಾಂಡ್‌ಗೆ ಬಿಟ್ಟ ವಿಚಾರ, ನಮ್ಮದು ರಾಷ್ಟ್ರೀಯ ಪಕ್ಷ, ಏನೇ ತೀರ್ಮಾನ ಮಾಡಬೇಕಾದರೂ ಹೈಕಮಾಂಡ್ ಜೊತೆ ಚರ್ಚೆ ಮಾಡಿ ಮುಂದುವರಿಯಬೇಕಾಗುತ್ತದೆ ಎಂದು ಹೇಳಿದರು.
ರಮೇಶ್ ಜಾರಕಿಹೊಳಿ ಸರ್ಕಾರ ಬೀಳುತ್ತೆ ಎನ್ನುವ ಹೇಳಿಕೆ ಕುರಿತು ಪ್ರತಿಕ್ರಿಯೆ ನೀಡಿದ ಸಿದ್ದರಾಮಯ್ಯ, ಅವರು ಅಧಿಕಾರಕ್ಕೆ ಬರುವಲ್ಲಿ ಸೋತಿದ್ದಾರೆ. ಈಗ ಅವರಿಗೆ ಬೇರೆ ಕೆಲಸ ಇಲ್ಲದೇ ಬಾಯಿಗೆ ಬಂದಂಗೆ ಮಾತನಾಡುತ್ತಾರೆ, ರಾಜ್ಯದ ಜನರು ನಮಗೆ 136 ಸೀಟು ಕೊಟ್ಟು ಗೆಲ್ಲಿಸಿದ್ದಾರೆ. ಐದು ವರ್ಷ ಸುಭದ್ರ ಸರ್ಕಾರ ಕೊಡುತ್ತೇವೆ. ಬಿಜೆಪಿಯವರು ಭ್ರಮನಿರಸವಾಗಿದ್ದಾರೆ. ಅವರಿಗೆ ಅಧಿಕಾರ ಇಲ್ಲದೇ ಇರಲು ಆಗುತ್ತಿಲ್ಲ, ಅದಕ್ಕಾಗಿ ಅಪರೇಷನ್ ಮೂಲಕ ಹಿಂಬಾಗಿಲ ಮೂಲಕ ಅಧಿಕಾರ ಪಡೆಯಲು ಪ್ರಯತ್ನ ಮಾಡುತ್ತಿದ್ದು, ಅದು ಸಾಧ್ಯವಾಗಲಾರದು ಎಂದು ಹೇಳಿದರು.