ನವದೆಹಲಿ: ಪ್ಯಾನ್ ನಂಬರ್ಗಳನ್ನು ಆಧಾರ್ ಜೊತೆ ಜೋಡಿಸಬೇಕೆಂದು ಸರ್ಕಾರ ಕಡ್ಡಾಯಗೊಳಿಸಿದ್ದು, ಜೂನ್ 30 ಡೆಡ್ಲೈನ್ ಕೊಡಲಾಗಿದೆ. ಈ ಬಾರಿ ಗಡುವು ವಿಸ್ತರಣೆ ಮಾಡಬಹುದು ಎಂಬ ನಿರೀಕ್ಷೆ ಇದೆ. ಆದರೆ, ಇಂದು ಸಂಜೆಯೊಳಗೆ ಈ ಬಗ್ಗೆ ಸರ್ಕಾರದಿಂದ ಸ್ಪಷ್ಟನೆ ಸಿಗಬಹುದು.
ಈ ಹಿಂದೆ ಐಟಿ ಇಲಾಖೆ ನೀಡಿದ ಮಾಹಿತಿ ಪ್ರಕಾರ ಜೂನ್ 30ರ ಬಳಿಕ ಮತ್ತೆ ಒಂದು ತಿಂಗಳು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡುವುದಕ್ಕೆ ಕಾಲಾವಕಾಶ ಕೊಡಬಹುದು. ಇದಕ್ಕೆ 1,000 ರೂ ದಂಡ ಪಾವತಿಸಬೇಕು. ಆದರೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ನಂಬರ್ ಜೂನ್ 30ರ ಬಳಿಕ ನಿಷ್ಕ್ರಿಯಗೊಳ್ಳುವುದು ಹೌದು. ಅದಾದ ಬಳಿಕ ಪ್ಯಾನ್ ಅನ್ನು ಮತ್ತೆ ಸಕ್ರಿಯಗೊಳಿಸುವ ಅವಕಾಶವನ್ನಂತೂ ಇಲಾಖೆ ಕೊಡಬಹುದು.
ಒಬ್ಬ ವ್ಯಕ್ತಿಗೆ ಒಂದಕ್ಕಿಂತ ಹೆಚ್ಚು ಪ್ಯಾನ್ ನಂಬರ್ಗಳು ಕೊಡಲಾಗಿರುವುದು; ಹಾಗೂ ಒಂದೇ ಪ್ಯಾನ್ ನಂಬರ್ ಅನ್ನು ಒಬ್ಬರಿಗಿಂತ ಹೆಚ್ಚು ಮಂದಿಗೆ ಅಲಾಟ್ ಮಾಡಲಾದ ಹಲವು ಪ್ರಕರಣಗಳು ಆದಾಯ ತೆರಿಗೆ ಇಲಾಖೆಯ ಗಮನಕ್ಕೆ ಬಂದಿದ್ದವು. 2017ರಲ್ಲಿ ಈ ಸಮಸ್ಯೆ ನಿವಾರಿಸಲು ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡಬೇಕೆನ್ನುವ ಕಾನೂನನ್ನು ತರಲಾಯಿತು. 2017 ಜುಲೈನಿಂದ ಪ್ಯಾನ್ ಪಡೆಯಲು ಆಧಾರ್ ದಾಖಲೆ ಕಡ್ಡಾಯಗೊಳಿಸಲಾಯಿತು. ಅದಕ್ಕಿಂತ ಮುಂಚೆ ಮಾಡಿಸಿದ ಪ್ಯಾನ್ ಅನ್ನು ಆಧಾರ್ ಜೊತೆ ಲಿಂಕ್ ಮಾಡುವಂತೆ ಸರ್ಕಾರ ಸೂಚಿಸಿತು.
ಪ್ರಾಯೋಗಿಕವಾಗಿ ನೋಡಿದರೆ 2017, ಜೂನ್ 30ಕ್ಕೆ ಮುಂಚೆ ಪ್ಯಾನ್ ಮಾಡಿಸಿದವರೆಲ್ಲರೂ ತಮ್ಮ ಆಧಾರ್ಗೆ ಲಿಂಕ್ ಮಾಡಿಸಬೇಕಾಗುತ್ತದೆ.
ಪ್ಯಾನ್–ಆಧಾರ್ ಲಿಂಕ್ ಯಾರಿಗೆ ಅಗತ್ಯ ಇಲ್ಲ?
- 80 ವರ್ಷ ವಯಸ್ಸು ದಾಟಿದವರು
- ಭಾರತೀಯ ನಾಗರಿಕರಲ್ಲದ ಪ್ಯಾನ್ ಕಾರ್ಡ್ದಾರರು
- ಐಟಿ ಕಾಯ್ದೆ ಪ್ರಕಾರ ಅನಿವಾಸಿ ವ್ಯಕ್ತಿಗಳು
ಜೂನ್ 30ರ ಬಳಿಕ ಪ್ಯಾನ್ ಮತ್ತು ಆಧಾರ್ ಲಿಂಕ್ ಮಾಡದಿದ್ದರೆ ಏನಾಗುತ್ತದೆ?
- ಜೂನ್ 30ರೊಳಗೆ ಆಧಾರ್ ಜೊತೆ ಲಿಂಕ್ ಆಗದ ಪ್ಯಾನ್ ಕಾರ್ಡ್ ನಿಷ್ಕ್ರಿಯಗೊಳ್ಳುತ್ತದೆ. ಇಂಥ ಪ್ಯಾನ್ ಕಾರ್ಡನ್ನು ಬಳಸಿದರೆ ಅಪರಾಧವಾಗುತ್ತದೆ.
- ಐಟಿ ರಿಟರ್ನ್ ಸಲ್ಲಿಸಲು ಆಗುವುದಿಲ್ಲ. ಈಗಾಗಲೇ ಐಟಿಆರ್ ಫೈಲ್ ಮಾಡಿದ್ದರೆ ಅದು ಪ್ರೋಸಸ್ ಆಗುವುದಿಲ್ಲ. ರೀಫಂಡ್ ಕೂಡ ಆಗುವುದಿಲ್ಲ.
- ಪ್ಯಾನ್ ನಿಷ್ಕ್ರಿಯಗೊಂಡರೆ ಹೆಚ್ಚು ತೆರಿಗೆ ಕಡಿತ ಆಗುತ್ತದೆ.
- ಬ್ಯಾಂಕುಗಳಲ್ಲಿ 50,000 ರೂಗಿಂತ ಹೆಚ್ಚು ಮೊತ್ತದ ಹಣ ವಹಿವಾಟು ಸಾಧ್ಯವಾಗುವುದಿಲ್ಲ