ಬೆಂಗಳೂರು: ಪ್ರತಿಯೊಬ್ಬ ಅಧಿಕಾರಿ ಸಂವಿಧಾನದ ಚೌಕಟ್ಟಿನೊಳಗೆ, ಸಂವಿಧಾನದ ಧ್ಯೇಯೋದ್ದೇಶಗಳನ್ನು ಅರಿತು ಕಾರ್ಯನಿರ್ವಹಿಸಬೇಕು. ವಿದ್ಯಾವಂತರಾದ ಅಧಿಕಾರಿಗಳು, ವೈಜ್ಞಾನಿಕ ಹಾಗೂ ವೈಚಾರಿಕ ಚಿಂತನೆಯನ್ನು ಕರ್ತವ್ಯ ನಿರ್ವಹಿಸುವ ಮೂಲಕ ಜಾತ್ಯಾತೀತ ಹಾಗೂ ಸಮಾನ ಸಮಾಜವನ್ನು ನಿರ್ಮಿಸಬಹುದಾಗಿದೆ. ಸರ್ಕಾರದ ನಿರೀಕ್ಷೆಗೆ ತಕ್ಕಂತೆ ಕಾರ್ಯನಿರ್ವಹಿಸುವ ಶಪಥವನ್ನು ಅಧಿಕಾರಿಗಳು ಕೈಗೊಳ್ಳಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆ ನೀಡಿದರು.
ಅವರು ಇಂದು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರೊಂದಿಗೆ ಕೆ.ಎ.ಎಸ್. ಅಧಿಕಾರಿಗಳ ಸಂಘದ ಶತಮಾನೋತ್ಸವ ಸಮಾರಂಭದಲ್ಲಿ ಮಾತನಾಡಿದರು. ರಾಜಕಾರಣಿಗಳು ಕಾನೂನು ಹಾಗೂ ನೀತಿಗಳನ್ನು ನಿರೂಪಿಸಿದರೆ, ಅವುಗಳನ್ನು ಜಾರಿಗೊಳಿಸುವುದು ಅಧಿಕಾರಿಗಳು. ಅಧಿಕಾರಿಗಳು, ಜನರು ಮತ್ತು ಸರ್ಕಾರದ ನಡುವೆ ಸೇತುವೆಯಾಗಿ ಕೆಲಸ ಮಾಡುತ್ತಾರೆ. ಅಧಿಕಾರಿಗಳು ಪ್ರಾಮಾಣಿಕವಾಗಿ, ಜನಪರವಾಗಿ ಕೆಲಸ ಮಾಡಿದರೆ ಸರ್ಕಾರಕ್ಕೆ ಒಳ್ಳೆಯ ಹೆಸರು ಬರುತ್ತದೆ. ಸರ್ಕಾರದ ಅಧಿಕಾರಿ ಹಾಗೂ ನೌಕರರು ಬಡವರ ವಿರೋಧಿ, ಜನವಿರೋಧಿ, ಭ್ರಷ್ಟಾಚಾರದಲ್ಲಿ ತೊಡಗಬಾರದು. ಜಾತಿ ಧರ್ಮಗಳ ಕಲಹದಲ್ಲಿಯೂ ಇರಬಾರದು. ಧರ್ಮಕ್ಕೂ, ಆಡಳಿತಕ್ಕೂ ಸಂಬAಧವಿಲ್ಲ ಎಂದರು.
ಅಧಿಕಾರಿಗಳು ಯಾವುದೇ ಕಾರಣಕ್ಕೂ ರಾಜಕಾರಣದಲ್ಲಿ ಅಥವಾ ಧರ್ಮ ಕಲಹಗಳಲ್ಲಿ ತೊಡಗಿಕೊಳ್ಳಬಾರದು. ಸಂವಿಧಾನವನ್ನು ರಕ್ಷಿಸಿದರೆ, ಸಂವಿಧಾನ ದೇಶವನ್ನು ರಕ್ಷಿಸುತ್ತದೆ. ಕಾನೂನಿನ ದೃಷ್ಟಿಯಲ್ಲಿ ಎಲ್ಲರೂ ಸಮಾನರು ಎಂದರು. ನಮ್ಮ ಸರ್ಕಾರ ಐದು ಗ್ಯಾರಂಟಿಗಳ ಜಾರಿಗೊಳಿಸುವ ಭರವಸೆಯನ್ನು ನೀಡಿದೆ. ಈಗಾಗಲೇ 3 ಗ್ಯಾರಂಟಿ ಜಾರಿಯಾಗಿವೆ. ಆಗಸ್ಟ್ 24 ರಂದು 4 ನೇ ಗ್ಯಾರಂಟಿ ಹಾಗೂ 5ನೇ ಗ್ಯಾರಂಟಿ ಡಿಸೆಂಬರ್ ಅಥವಾ ಜನವರಿ 2024 ರಲ್ಲಿ ಜಾರಿಯಾಗುವ ಸಾಧ್ಯತೆ ಇದೆ. ಗ್ಯಾರಂಟಿ ಯೋಜನೆಗಳ ಯಶಸ್ಸು ಅಧಿಕಾರಿಗಳ ಮೇಲೆ ಅವಲಂಬಿತವಾಗಿದೆ. ಸ್ವಾತಂತ್ರ‍್ಯ ಭಾರತದ ಫಲವನ್ನು ಜನರಿಗೆ ತಲುಪಿಸುವ ಮೂಲಕ ಸಾಮಾಜಿಕ ಸುಧಾರಣೆಯನ್ನು ತರಬಹುದಾಗಿದೆ ಎಂದರು.
ಇದೇ ದಿನ ಮಹಾತ್ಮಾ ಗಾಂಧಿಯವರು ಬ್ರಿಟೀಷರಿಗೆ ಅಂತಿಮ ಕರೆ ನೀಡಿದ ಕ್ವಿಟ್ ಇಂಡಿಯಾ ದಿನವನ್ನು ಇಂದು ಆಚರಣೆ ಮಾಡಲಾಗುತ್ತಿದೆ. ಪ್ರತಿಯೊಬ್ಬರೂ ಸಮಾಜಕ್ಕೆ ತಮ್ಮನ್ನು ತಾವು ಅರ್ಪಿಸಿಕೊಳ್ಳಬೇಕೆಂದು ಸಂಕಲ್ಪ ಮಾಡಬೇಕಾದ ದಿನ. ಅಧಿಕಾರಿಗಳಾಗಲಿ, ಜನರಾಗಲಿ, ಸಮಾಜ ನನಗೇನು ಮಾಡಿತು ಎನ್ನುವ ಬದಲು ಸಮಾಜಕ್ಕೆ ನನ್ನ ಕೊಡುಗೆ ಏನು ಎಂಬುದನ್ನು ಅರಿತುಕೊಳ್ಳಬೇಕು. ಸಮಾಜವನ್ನು ಬದಲಾವಣೆ , ಸುಧಾರಣೆ , ಸಮಾನತೆಯ ಸಮಾಜ ನಿರ್ಮಾಣದ ಜವಾಬ್ದಾರಿ ನಮ್ಮ ಮೇಲಿದೆ. ಇದೇ ತತ್ವವನ್ನು ಬಸವ, ಬುದ್ಧ, ಗಾಂಧೀಜಿ, ಅಂಬೇಡ್ಕರ್ , ಕುವೆಂಪು, ನಾರಾಯಣಗುರು ಸೇರಿದಂತೆ ಹಲವು ದಾರ್ಶನಿಕರು ಬೋಧಿಸಿದ್ದಾರೆ ಎಂದರು.
ಸಮಾರAಭದಲ್ಲಿ ಕಂದಾಯ ಸಚಿವ ಕೃಷ್ಣ ಬೈರೇಗೌಡ, ಸರ್ಕಾರದ ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮ, ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹಾಗೂ ಅಭಿವೃದ್ಧಿ ಆಯುಕ್ತ ಡಾ.ಇ.ವಿ. ರಮಣರೆಡ್ಡಿ, ಕೆ.ಎ.ಎಸ್. ಅಧಿಕಾರಿಗಳ ಸಂಘದ ಅಧ್ಯಕ್ಷ ರವಿ ತಿರ್ಲಾಪೂರ ಮತ್ತು ಇತರ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.