ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕುರಿತು ಬಿಬಿಸಿ ನಿರ್ಮಿಸಿದ ವಿವಾದಿತ ಸಾಕ್ಷ್ಯಚಿತ್ರವನ್ನು ನಿಷೇಧದ ನಂತರವೂ ಪ್ರಸಾರ ಮಾಡಲು ಮುಂದಾದ ಕಾರಣಕ್ಕೆ ಮೂವರು ಎಡಪಂಥೀಯ ವಿದ್ಯಾರ್ಥಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಪ್ರತಿಷ್ಠಿತ ಜಮಿಯಾ ಮಿಲಿಯಾ ಇಸ್ಲಾಮಿಯಾ ವಿವಿಯಲ್ಲಿ ಈ ಡಾಕ್ಯುಮೆಂಟರಿಯನ್ನು ಇಂದು ಸಂಜೆ ಪ್ರಸಾರ ಮಾಡಲು ವಿದ್ಯಾರ್ಥಿಗಳು ಮುಂದಾಗಿದ್ದರು. ಆದರೆ ಮುಂಜಾಗೃತ ಕ್ರಮವಾಗಿ ಪೊಲೀಸರು ಆ ವಿದ್ಯಾರ್ಥಿಗಳನ್ನು ಬಂಧಿಸಿದ್ದು, ತರಗತಿಗಳನ್ನು ಬಂದ್ ಮಾಡಿದ್ದಾರೆ.
ಸ್ಟುಡೆಂಟ್ ಫೆಡರೇಷನ್ ಆಫ್ ಇಂಡಿಯಾದ ವಿದ್ಯಾರ್ಥಿಗಳು ಈ ಡಾಕ್ಯುಮೆಂಟರಿಯನ್ನು ಫೇಸ್ಬುಕ್ ಮೂಲಕ ಪ್ರಸಾರ ಮಾಡುತ್ತೇವೆ ಎಂದು ಘೋಷಿಸಿದ ನಂತರ ಜಮೀಯಾ ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ ಕ್ಯಾಂಪಸ್ನ ಆವರಣದಲ್ಲಿ ಯಾವುದೇ ಅನಧಿಕೃತ ವ್ಯಕ್ತಿಗಳಿಗೆ ಕೂಟಗಳಿಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಮುಂಜಾಗೃತ ಕ್ರಮವಾಗಿ ಆಗ್ನೇಯ ದೆಹಲಿಯಲ್ಲಿರುವ ಈ ಕಾಲೇಜಿನ ಆವರಣಕ್ಕೆ ಪೊಲೀಸರು ಆಶ್ರುವಾಯು ಫಿರಂಗಿಗಳೊಂದಿಗೆ ಆಗಮಿಸಿದ್ದಾರೆ.
2002ರಲ್ಲಿ ನರೇಂದ್ರ ಮೋದಿಯವರು ಗುಜರಾತ್ನ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ನಡೆದ ಗೋಧ್ರ ಹತ್ಯಾಕಾಂಡದ ನಂತರ ಉಂಟಾದ ಗಲಭೆಗೆ ಸಂಬಂಧಿಸಿದಂತೆ ಈ ಸಾಕ್ಷ್ಯಾಚಿತ್ರದಲ್ಲಿ ವಿವಾದಾತ್ಮಕ ವಿಚಾರಗಳಿವೆ. ಬಿಬಿಸಿಯ ಈ ಸಾಕ್ಷ್ಯಚಿತ್ರಕ್ಕೆ ಈಗಾಗಲೇ ಕೇಂದ್ರ ಸರ್ಕಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ವಿರೋಧ ವ್ಯಕ್ತಪಡಿಸಿದೆ. ಅಲ್ಲದೇ ಸರ್ಕಾರವು ಚಲನಚಿತ್ರವನ್ನು ನಿಷೇಧಿಸಿದ್ದು, ಸಾಮಾಜಿಕ ಜಾಲತಾಣ ಕಂಪನಿಗಳಿಗೆ ಅದರ ಲಿಂಕ್ಗಳನ್ನು ತೆಗೆದು ಹಾಕುವಂತೆ ಕೇಳಿದೆ. ಆದರೆ ಸರ್ಕಾರದ ಈ ಕ್ರಮವನ್ನು ಪ್ರತಿಪಕ್ಷಗಳು ಘೋರ ಸೆನ್ಸಾರ್ಶಿಪ್ ಎಂದು ಟೀಕಿಸಿದ್ದವು, ಅಲ್ಲದೇ ತೃಣಮೂಲ ಕಾಂಗ್ರೆಸ್ನ ಮಹಿಳಾ ಸಂಸದರೊಬ್ಬರು ಡಿಲೀಟ್ ಆದ ಈ ಸಾಕ್ಷ್ಯಚಿತ್ರವನ್ನು ಆರ್ಕೈವ್ನಿಂದ ತೆಗೆದು ಟ್ವಿಟ್ಟರ್ನಲ್ಲಿ ಪೋಸ್ಟ್ ಮಾಡಿದ್ದರು.
ನಿನ್ನೆ ಸಂಜೆ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದಲ್ಲಿ ಕೆಲವು ವಿದ್ಯಾರ್ಥಿಗಳು ಇದೇ ರೀತಿಯ ಪ್ರದರ್ಶನ ಆಯೋಜಿಸಿದ್ದರು. ಆದರೆ ವಿದ್ಯಾರ್ಥಿ ಸಂಘದ ಕಚೇರಿಯಲ್ಲಿ ಇಂಟರ್ನೆಟ್ ಮತ್ತು ವಿದ್ಯುತ್ ಎರಡೂ ಸ್ಥಗಿತಗೊಂಡಿದ್ದರಿಂದ ತೊಂದರೆಯಾಯಿತು. ಹೀಗಾಗಿ ಈ ಸಾಕ್ಷ್ಯಚಿತ್ರ ನೋಡಲು ತಮ್ಮ ಫೋನ್ ಹಾಗೂ ಲ್ಯಾಪ್ಟಾಪ್ ಹಿಡಿದು ಅಲ್ಲಿ ಸೇರಿದ್ದ ನೂರಾರು ವಿದ್ಯಾರ್ಥಿಗಳು ಸಾಕ್ಷ್ಯಚಿತ್ರವನ್ನು ನೋಡಲಾಗದೇ ಕತ್ತಲೆಯಲ್ಲಿ ಕೂತಿದ್ದರು. ನಂತರ ಕತ್ತಲೆಯಲ್ಲಿಯೇ ಹೊರಗೆ ಒಟ್ಟಿಗೆ ಸೇರಿ ಪ್ರತಿಭಟನಾ ಮೆರವಣಿಗೆಯೊಂದಿಗೆ ಈ ಸಮಾವೇಶ ಕೊನೆಗೊಂಡಿತು. ಈ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಿದರೆ ಶಿಸ್ತು ಕ್ರಮ ಜರುಗಿಸುವುದಾಗಿ ಜೆಎನ್ಯು ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದು, ಈ ಕ್ರಮವು ಕ್ಯಾಂಪಸ್ನಲ್ಲಿ ಶಾಂತಿ ಮತ್ತು ಸೌಹಾರ್ದತೆಗೆ ಭಂಗ ತರಬಹುದು ಎಂದು ಎಚ್ಚರಿಕೆ ನೀಡಿದ್ದಾರೆ.
ಪ್ರಧಾನಿ ಮೋದಿಯವರ ಸರ್ಕಾರವು ಎರಡು ಭಾಗಗಳ ಸಾಕ್ಷ್ಯಚಿತ್ರ ಸರಣಿ ‘ಇಂಡಿಯಾ: ಮೋದಿ ಕ್ವೆಶ್ಚನ್’ ಹೆಸರಿನ ಈ ಸಾಕ್ಷ್ಯಚಿತ್ರವನ್ನು ‘ಪ್ರಚಾರದ ತುಣುಕು’ ಎಂದು ದೂರಿದೆ. ಗುಜರಾತ್ ಗಲಭೆ ಪ್ರಕರಣದಲ್ಲಿ ಪ್ರಧಾನಿ ನರೇಂದ್ರ ಮೋದಿ ಆರೋಪಮುಕ್ತರಾಗಿದ್ದಾರೆ. ಅಲ್ಲದೇ ಅವರನ್ನು ದೋಷಮುಕ್ತಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಿದ ಅರ್ಜಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿಸಿತ್ತು.
2002 ರಲ್ಲಿ ಗುಜರಾತ್ನಲ್ಲಿ ನಡೆದ ಮೂರು ದಿನಗಳ ಹಿಂಸಾಚಾರದಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದರು. ಅಯೋಧ್ಯೆಗೆ ಹೊರಟಿದ್ದ ಕರಸೇವಕರಿದ್ದ ರೈಲಿಗೆ ಬೆಂಕಿ ಹಚ್ಚಲಾಗಿತ್ತು. ಇದರಿಂದ 59 ಕರಸೇವಕರು ಸಜೀವ ದಹನಗೊಂಡಿದ್ದರು, ಇದಾದ ನಂತರದ ಹಿಂಸಾಚಾರದಲ್ಲಿ ಲ್ಲಿ 1,000 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದರು. ಗೋಧ್ರೋತ್ತರ ಗಲಭೆಯನ್ನು ತಡೆಯಲು ರಾಜ್ಯ ಪೊಲೀಸರು ಸಾಕಷ್ಟು ಪ್ರಯತ್ನಗಳನ್ನು ಮಾಡಲಿಲ್ಲ ಎಂಬ ಗಂಭೀರ ಆರೋಪವನ್ನು ಅವರು ಎದುರಿಸಿದರು.