ಕಾರ್ಕಳ: ಶ್ರೀರಾಮಸೇನೆ ಸಂಸ್ಥಾಪಕ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಹಿಂದುತ್ವದ ಪರವಾಗಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಲಿರುವ ಪ್ರಮೋದ್ ಮುತಾಲಿಕ್ ಅವರ ವಿರುದ್ಧ ಉಡುಪಿ ಜಿಲ್ಲಾ ಬಿಜೆಪಿ ಯುವಮೋರ್ಚಾ ಅಧ್ಯಕ್ಷ ವಿಖ್ಯಾತ್ ಶೆಟ್ಟಿ ಹಾಗೂ ಕಾರ್ಕಳ ಬಿಜೆಪಿ ಸಾಮಾಜಿಕ ಜಾಲತಾಣದ ಉಸ್ತುವಾರಿ ಹರ್ಷವರ್ಧನ್ ನಿಟ್ಟೆ ಎಂಬವರು ಫೇಸ್ ಬುಕ್‌ನಲ್ಲಿ ಅವಹೇಳನಕಾರಿ ಪೋಸ್ಟ್ ಹಾಕಿದ್ದಾರೆ ಎಂದು ಗದಗ ಶ್ರೀರಾಮ ಸೇನೆ ಆರೋಪಿಸಿದೆ.
ಪ್ರಮೋದ್ ಮುತಾಲಿಕ್ ಅವರ ಬಗ್ಗೆ ಭ್ರಷ್ಟಾಚಾರ ಹಾಗೂ ಇತರೇ ಸುಳ್ಳು ಆರೋಪಗಳನ್ನು ಮಾಡಿ ಅವರ ತೇಜೋವಧೆ ಮಾಡಿದ್ದು, ಈ ಹಿನ್ನಲೆಯಲ್ಲಿ ವಿಖ್ಯಾತ್ ಶೆಟ್ಟಿಯವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕೆಂದು ರಮೇಶ್ ರಾಜ್ ಎಂಬವರು ಪೊಲೀಸರಿಗೆ ದೂರು ನೀಡಿದ್ದು, ಈ ಕುರಿತು ಕೋಲಾರ ಸೆನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಆಕ್ಷೇಪಾರ್ಹ ಪೋಸ್ಟ್ ಹಾಕಿರುವ ಕುರಿತು ಹರೀಶ್ ಹಾಗೂ ವಿಖ್ಯಾತ್ ಶಟ್ಟಿಯವರ ಫೋನ್ ಸಂಭಾಷಣೆಯ ಆಡಿಯೋ ಹಾಗೂ ದೂರಿನ ಪ್ರತಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.
ಕಾರ್ಕಳದಲ್ಲಿ ಸುನಿಲ್ ಕುಮಾರ್ ಬಣ ಹಾಗೂ ಮುತಾಲಿಕ್ ಬಣದ ನಡುವೆ ಫೇಸ್ ಬುಕ್ ವಾಟ್ಸಾಪ್ ನಲ್ಲಿ ಆರೋಪ ಪ್ರತ್ಯಾರೋಪಗಳು ಮುಗಿಲುಮುಟ್ಟಿದ್ದು ಈ ನಡುವೆ ಇದೀಗ ಹೊಸದೊಂದು ವಿವಾದ ಸೃಷ್ಟಿಯಾಗಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಬಣಗಳ ನಡುವಿನ ವಾಕ್ಸಮರ ತಾರಕ್ಕೇರುವ ಎಲ್ಲಾ ಲಕ್ಷಣಗಳು ಸ್ಪಷ್ಟವಾಗಿದೆ