Share this news

ಮಂಗಳೂರು : ಸರಕಾರಿ ಬಸ್ ಸೇರಿದಂತೆ, ಖಾಸಗಿ ಬಸ್ಸುಗಳ ಫುಟ್‌ಬೋರ್ಡ್‌ನಲ್ಲಿ ನೇತಾಡಿಕೊಂಡು ಪ್ರಯಾಣಿಸುವುದು, ಶಾಲಾ ವಾಹನಗಳು ಸೇರಿದಂತೆ ಖಾಸಗಿ ವಾಹನಗಳಲ್ಲಿ ಹೆಚ್ಚುವರಿ ಪ್ರಯಾಣಿಕರನ್ನು ತುಂಬಿಸಿದರೆ ಅಂತಹ ವಾಹನಗಳನ್ನು ವಶಕ್ಕೆ ಪಡೆದು, ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ದ.ಕ. ಜಿಲ್ಲೆಯ ಎಸ್ಪಿ ಸಿ.ಬಿ. ಋಷ್ಯಂತ್ ಖಡಕ್ ಎಚ್ಚರಿಕೆ ನೀಡಿದ್ದಾರೆ.

ದ.ಕ.ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಕಚೇರಿ ಸಭಾಂಗಣದಲ್ಲಿ ಸೋಮವಾರ ನಡೆದ ಎಸ್‌ಸಿ/ಎಸ್‌ಟಿ ಕುಂದುಕೊರತೆ ಸಭೆಯಲ್ಲಿ ದಲಿತ ಮುಖಂಡರ ದೂರಿನ ಮೇರೆಗೆ ಈ ಪ್ರತಿಕ್ರಿಯೆ ನೀಡಿದರು. ದಲಿತ ನಾಯಕಿ ಈಶ್ವರಿ ಅವರು ವಿಷಯ ಪ್ರಸ್ತಾಪಿಸಿ, ಬೆಳ್ತಂಗಡಿ ಭಾಗದಲ್ಲಿ ಸರಕಾರಿ ಬಸ್ಸಿನಲ್ಲಿ ಫುಟ್‌ಬೋರ್ಡ್‌ನಲ್ಲಿ ಅಪಾಯಕಾರಿಯಾಗಿ ನೇತಾಡಿಕೊಂಡು ಪ್ರಯಾಣಿಸುವ ಪರಿಸ್ಥಿತಿ ಇದೆ. ಹೆಚ್ಚುವರಿ ಬಸ್ಸಿನ ವ್ಯವಸ್ಥೆ ಆಗಬೇಕು. ಈ ಬಗ್ಗೆ ಸಂಬಂಧಪಟ್ಟವರಿಗೆ ಪೊಲೀಸ್ ಇಲಾಖೆಯಿಂದ ಶಿಫಾರಸು ಮಾಡಬೇಕು ಎಂದು ಆಗ್ರಹಿಸಿದರು. ಎಸ್ಪಿ ಋಷ್ಯಂತ್ ಮಾತನಾಡಿ, ‘ಇದು ನಾನೂ ಗಮನಸಿದ್ದೇನೆ. ವೀಡಿಯೋ ಕೂಡಾ ನಾನು ನೋಡಿದ್ದೇನೆ. ಇದು ಅತ್ಯಂತ ಗಂಭೀರ ಹಾಗೂ ಅಪಾಯಕಾರಿ. ತಿರುವುಗಳಲ್ಲಿ ಅತ್ಯಂತ ಅಪಾಯಕಾರಿ ರೀತಿಯಲ್ಲಿ ಸಂಚರಿಸುತ್ತಿರುವುದು ಕಂಡು ಬಂದಿದೆ. ಅಧಿಕಾರಿಗಳು ಈ ಬಗ್ಗೆ ಕಟ್ಟುನಿಟ್ಟಿನ ಕ್ರಮ ವಹಿಸಬೇಕು ಎಂದರು. ಬೆಳ್ತಂಗಡಿಯ ಶೇಖರ್ ಅವರು ಮಾತನಾಡಿ, ನಾರಾವಿಯಿಂದ ಬೆಳ್ತಂಗಡಿಗೆ ಒಂದು ಸರಕಾರಿ ಬಸ್ಸಿಗಾಗಿ ಸುಮಾರು 300ರಷ್ಟು ಪ್ರಯಾಣಿಕರು ಕಾಯಬೇಕಾದ ಪರಿಸ್ಥಿತಿ ಇದೆ. ಅಲ್ಲಿಗೆ ಹೆಚ್ಚುವರಿ ಸರಕಾರಿ ಬಸ್ಸುಗಳ ಅಗತ್ಯವಿದೆ ಎಂದು ಒತ್ತಾಯಿಸಿದರು. ಶಾಲೆಗಳಿಗೆ ಮಕ್ಕಳನ್ನು ಒಯ್ಯುವ ಆಟೋಗಳಲ್ಲಿಯೂ 10ಕ್ಕೂ ಅಧಿಕ ಮಕ್ಕಳನ್ನು ತುಂಬಿಸಲಾಗುತ್ತಿದೆ ಎಂಬ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಎಲ್ಲಾ ಶಾಲೆಗಳಿಗೆ ಡಿಡಿಪಿಐ ಮೂಲಕ, ಮಕ್ಕಳ ಸಾಗಾಟದ ವಾಹನಗಳ ಬಗ್ಗೆ ಗಮನ ಹರಿಸುವಂತೆ ಸೂಚನೆ ನೀಡಬೇಕು. ಅಂತಹ ವಾಹನಗಳು ಕಂಡು ಬಂದರೆ ಸರ್ಕಲ್‌ಗಳಲ್ಲಿ ಟ್ರಾಫಿಕ್ ಪೊಲೀಸರು ವಾಹನಗಳನ್ನು ತಡೆದು ಪ್ರಕರಣ ದಾಖಲಿಸಿ ದಂಡ ವಿಧಿಸಿ ಎಂದು ಎಸ್ಪಿ ಸೂಚಿಸಿದರು

 

Leave a Reply

Your email address will not be published. Required fields are marked *