Share this news

ಬೆಂಗಳೂರು: ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣದ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ. ಪ್ರಕರಣ ಸಂಬಂಧ ನ್ಯಾಯಾಂಗ ಬಂಧನದಲ್ಲಿರುವ ಕೆ.ಇಸ್ಮಾಯಿಲ್ ಶಫಿ, ಕೆ.ಮೊಹಮ್ಮದ್ ಇಕ್ಬಾಲ್ ಮತ್ತು ಎಂ.ಶಾಹೀದ್ ಜಾಮೀನು ಕೋರಿ ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿಯನ್ನು ತಿರಸ್ಕರಿಸಿ ನ್ಯಾಯಮೂರ್ತಿಗಳಾದ ಎಚ್.ಬಿ. ಪ್ರಭಾಕರ್ ಶಾಸ್ತ್ರಿ ಮತ್ತು ಅನಿಲ್ ಕೆ.ಕಟ್ಟಿ ಅವರಿದ್ದ ವಿಭಾಗೀಯ ಪೀಠ ಆದೇಶಿಸಿದೆ.

ಮೇಲ್ಮನವಿದಾರ ಆರೋಪಿಗಳು ಪ್ರಕರಣದಲ್ಲಿ ಸಕ್ರಿಯ ಪಾತ್ರ ವಹಿಸಿದ್ದ ಬಗ್ಗೆ ಸೂಕ್ತ ಸಾಕ್ಷ್ಯಧಾರಗಳು ಲಭ್ಯವಿದೆ. ಮೃತನ ಮೇಲೆ ದಾಳಿ ನಡೆದ ವೇಳೆ ಸ್ಥಳದಲ್ಲಿ ಈ ಮೂರು ಆರೋಪಿಗಳು ಇರಲಿಲ್ಲ. ಆದರೆ, ಪ್ರವೀಣ್ ನೆಟ್ಟಾರು ಹತ್ಯೆಗೆ ಯೋಜನೆ ರೂಪಿಸುವ ಪಿತೂರಿ ಸಭೆಯಲ್ಲಿ ಭಾಗವಹಿಸಿ ಚರ್ಚಿಸಿದ್ದರು. ಪಿತೂರಿ ರೂಪಿಸಲು ಯಾವುದೇ ಬಹಿರಂಗ ಕ್ರಿಯೆಯನ್ನು ಮಾಡುವ ಅಗತ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದೆ.

ಮೇಲ್ಮನವಿದಾರರು ನೆಟ್ಟಾರು ಹತ್ಯೆಯ ಪಿತೂರಿಯಲ್ಲಿ ಭಾಗವಹಿಸಿರುವುದು ಸತ್ಯವಾಗಿದ್ದು, ಅದು ಭಯೋತ್ಪಾದಕ ಕೃತ್ಯವನ್ನು ಸಮರ್ಥಿಸುವ, ಪ್ರೋತ್ಸಾಹಿಸುವ ಮತ್ತು ಸುಗಮಗೊಳಿಸುವುದಾಗಿದೆ. ಜತೆಗೆ, ಕಾನೂನು ಬಾಹಿರ ಚುಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಎಪಿ) ಭಯೋತ್ಪಾದಕ ಕೃತ್ಯದ ಪೂರ್ವಸಿದ್ಧತೆ ಕ್ರಿಯೆಯಾಗಿದ್ದು, ಶಿಕ್ಷಾರ್ಹ ಅಪರಾಧವಾಗಿದೆ ಎಂದು ತಿಳಿಸಿದ ನ್ಯಾಯಪೀಠ ಮೇಲ್ಮನವಿಯನ್ನು ವಜಾಗೊಳಿಸಿ ಆರೋಪಿಗಳಿಗೆ ಜಾಮೀನು ನಿರಾಕರಿಸಿದೆ.

ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಯುವ ಮೋರ್ಚಾದ ಕಾರ್ಯಕಾರಿ ಸಮಿತಿಯ ಸದಸ್ಯನಾಗಿದ್ದ ಪ್ರವೀಣ್ ನೆಟ್ಟಾರು, ಸುಳ್ಯ ತಾಲೂಕಿನ ಬೆಳ್ಳಾರೆ ಗ್ರಾಮ ಅಕ್ಷಯ ಫ್ರೆಶ್ ಚಿಕನ್ ಫಾರ್ಮ್ ಶಾಪ್ ಹೊಂದಿದ್ದರು. ಅವರು 2022ರ ಜು.26ರಂದು ರಾತ್ರಿ ಮನೆಗೆ ಬೈಕಿನಲ್ಲಿ ವಾಹನದಲ್ಲಿ ಹೋಗುತ್ತಿದ್ದಾಗ ಕೆಲ ದುಷ್ಕರ್ಮಿಗಳು ಮಾರಾಕಾಸ್ತ್ರಗಳಿಂದ ಅವರ ಮೇಲೆ ದಾಳಿ ನಡೆಸಿ, ಮಾರಣಾಂತಿಕ ಹಲ್ಲೆ ನಡೆಸಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸುವ ಮಾರ್ಗಮಧ್ಯ ಕೊನೆಯುಸಿರೆಳೆದಿದ್ದರು.

ಘಟನೆ ಕುರಿತು ಪ್ರವೀಣ್ ಸ್ನೇಹಿತ ಮಧುಕುಮಾರ್ ಬೆಳ್ಳಾರೆ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಯುತ್ತಿದ್ದ ವೇಳೆ ಪ್ರಕರಣವನ್ನು ಎನ್‌ಐಎಗೆ ವಹಿಸಿ 2022ರ ಆ.3ರಂದು ಕೇಂದ್ರ ಸರ್ಕಾರ ಆದೇಶಿಸಿತ್ತು. 2022ರ ಆ.4ರಂದು ಎನ್‌ಐಎ ತನಿಖಾಧಿಕಾರಿಗಳು ಪ್ರಕರಣವನ್ನು ಮತ್ತೆ ದಾಖಲಿಸಿಕೊಂಡು ತನಿಖೆ ವೇಳೆ ಮೇಲ್ಮನವಿದಾರ ಆರೋಪಿಗಳನ್ನು ಬಂಧಿಸಿದ್ದರು. ಈ ಮೂವರು ಆರೋಪಿಗಳಿಗೆ ಜಾಮೀನು ನಿರಾಕರಿಸಿ 49ನೇ ಸಿಟಿ ಸಿವಿಲ್ ಮತ್ತು ಸೆಷನ್ಸ್ ಕೋರ್ಟ್ (ಎನ್‌ಐಎ ವಿಶೇಷ ನ್ಯಾಯಾಲಯ) 2023ರ ಏ.29ರಂದು ಆದೇಶಿಸಿತು. ಇದರಿಂದ ಅವರು ಹೈಕೋರ್ಟ್ ಮೊರೆ ಹೋಗಿದ್ದರು. ಆರೋಪಿಗಳ ವಿರುದ್ಧದ ಪ್ರಕರಣ ಎನ್‌ಐಎ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ಹಂತದಲ್ಲಿದೆ.

 

 

 

 

 

 

 

 

 

Leave a Reply

Your email address will not be published. Required fields are marked *