Share this news

ಕಾರ್ಕಳ: ರಾಜ್ಯಮಟ್ಟದ ಸಮಗ್ರ ಯಕ್ಷಗಾನ ಸಮ್ಮೇಳನವು ಫೆ 11 ,12ರಂದು ಉಡುಪಿಯ ಕುಂಜಿಬೆಟ್ಟು ಎ ಎಲ್ ಎನ್ ರಾವ್ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಯಕ್ಷಗಾನ ಸಮಿತಿಯ ಸದಸ್ಯ ಮಹಾವೀರ ಪಾಂಡಿ ಹೇಳಿದರು.

ಅವರು ಕಾರ್ಕಳ ಹೊಟೇಲ್ ಪ್ರಕಾಶ್ ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿ, ಯಕ್ಷಗಾನ ರಂಗದಲ್ಲಿ ಹಲವಾರು ಕಲಾಪ್ರಕಾರಗಳಿದ್ದು ರಾಜ್ಯದ ನಾನಾ ಭಾಗಗಳ ಕಲಾವಿದರು ಹಾಗೂ ಪ್ರಾದೇಶಿಕ ಯಕ್ಷಗಾನ ಕಲಾಪ್ರಕಾರಗಳನ್ನು ಒಗ್ಗೂಡಿಸಿ ಯಕ್ಷಗಾನ ಕಲೆಗೆ ಬಲತುಂಬಿಸುವ ನಿಟ್ಟಿನಲ್ಲಿ ಯಕ್ಷಗಾನ ಸಮ್ಮೇಳನ ಆಯೋಜಿಸಲಾಗಿದೆ ಎಂದರು.


ಫೆ 11 ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನವನ್ನು ಉದ್ಘಾಟಿಸಲಿದ್ದು, ವಿಧಾನಸಭೆ ಸಭಾಪತಿ ವಿಶ್ವೇಶ್ವರ ಹೆಗಡೆ ಕಾಗೇರಿ ಪುಸ್ತಕ ಬಿಡುಗಡೆ ಮಾಡಲಿದ್ದು, ಉಡುಪಿ ಜಿಲ್ಲಾ ಉಸ್ತುವಾರಿ ಸಚಿವ ಎಸ್ ಅಂಗಾರ ವಾಣಿಜ್ಯ ಮಳಿಗೆ ಉದ್ಘಾಟಿಸಲಿದ್ದಾರೆ. ಸಚಿವ ಕೋಟ ಶ್ರೀನಿವಾಸ ಪೂಜಾರಿ ಚೌಕಿ ಉದ್ಘಾಟಿಸಲಿದ್ದು,ಇಂಧನ ಸಚಿವ ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಲಿದ್ದಾರೆ. ಹಿರಿಯ ಯಕ್ಷಗಾನ ವಿದ್ವಾಂಸ ಡಾ.ಎಂ ಪ್ರಭಾಕರ ಜೋಶಿ ಸಮ್ಮೇಳನಾಧ್ಯಕ್ಷತೆ ವಹಿಸಲಿದ್ದು, ಶಾಸಕ ರಘುಪತಿ ಭಟ್ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಮಹಾವೀರ ಪಾಂಡಿ ಹೇಳಿದರು
ಮುಖ್ಯ ಅತಿಥಿಗಳಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಹಿಂದುಳಿದ ವರ್ಗಗಳ ಆಯೋಗದ ಅದ್ಯಕ್ಷ ಜಯಪ್ರಕಾಶ್ ಹೆಗ್ಡೆ ಮುಂತಾದವರು ಭಾಗವಹಿಸಲಿದ್ದಾರೆ ಎಂದರು


ಎರಡು ದಿನಗಳ ಯಕ್ಷಗಾನ ಸಮ್ಮೇಳನದಲ್ಲಿ ವಿವಿಧ ಗೋಷ್ಠಿಗಳು ನಡೆಯಲಿದ್ದು, ಪ್ರಮುಖವಾಗಿ ಯಕ್ಷ ಶಿಕ್ಷಣದ ಸವಾಲುಗಳು, ಯಕ್ಷಗಾನ ಕನ್ನಡದ ಅಸ್ಮಿತೆ,ಯಕ್ಷಗಾನ ಮತ್ತು ಭಾರತೀಯ ಚಿಂತನೆ,ಮೂಡಲಪಾಯದ ಸ್ವರೂಪ ಚಿಂತನೆ, ಮಹಿಳಾ ಯಕ್ಷಗಾನ ಚಿಂತನೆ,ಯಕ್ಷಗಾನ ಪ್ರಸಾರ ಮತ್ತು ಪ್ರಯೋಗ ಸೇರಿದಂತೆ 6 ಯಕ್ಷಗಾನ ಗೋಷ್ಠಿಗಳು ನಡೆಯಲಿವೆ.
ಇದಲ್ಲದೇ ಯಕ್ಷಗಾನ ಗೊಂಬೆಯಾಟ,ತೆಂಕು,ಬಡಗು ಸೇರಿದಂತೆ ವಿವಿಧ ಯಕ್ಷಗಾನ ಕಲಾಪ್ರಕಾರಗಳ ಪ್ರದರ್ಶನ ನಡೆಯಲಿದೆ ಅಲ್ಲದೇ ಇದೇ ವೇಳೆ 75 ಮಂದಿ ಯಕ್ಷಗಾನ ಸಾಧಕರಿಗೆ ಸನ್ಮಾನಿಸಲಾಗುವುದೆಂದು ಮಹಾವೀರ ಪಾಂಡಿ ತಿಳಿಸಿದರು.
ಈ ಸಂದರ್ಭದಲ್ಲಿ ಕಾರ್ಕಳ ಯಕ್ಷಕಲಾರಂಗದ ಅಧ್ಯಕ್ಷ ವಿಜಯ ಶೆಟ್ಟಿ, ಸದಾನಂದ ಆಚಾರ್ಯ, ಪದ್ಮನಾಭ ಗೌಡ, ಶ್ರೀವರ್ಮ ಅಜ್ರಿ, ಸುರೇಶ್ ಮಡಿವಾಳ, ಭಾಸ್ಕರ ಕುಲಾಲ್,,ಸುಬ್ರಹ್ಮಣ್ಯ ಬೈಪಾಡಿತ್ತಾಯ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *