Share this news

ಬೆಂಗಳೂರು: ಪಕ್ಷ ಸಂಘಟನೆ ಮತ್ತು ಲೋಕಸಭಾ ಚುನಾವಣೆಯ ದೃಷ್ಟಿಯಿಂದ ರಾಷ್ಟ್ರದಾದ್ಯಂತ ರೈತ ಮೋರ್ಚಾ ವತಿಯಿಂದ ‘ಗ್ರಾಮ ಪರಿಕ್ರಮ ಯಾತ್ರೆ’ಯನ್ನು ಫೆಬ್ರವರಿ 12ರಿಂದ ಹಮ್ಮಿಕೊಳ್ಳಲಾಗುವುದು ಎಂದು ಬಿಜೆಪಿ ರಾಜ್ಯ ರೈತ ಮೋರ್ಚಾ ಅಧ್ಯಕ್ಷ ಎ.ಎಸ್.ನಡಹಳ್ಳಿ ಅವರು ತಿಳಿಸಿದರು.

ನಗರದ ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಅವರು, ಇದೇ ಫೆ. 12ರಂದು ಮಧ್ಯಾಹ್ನ 12.30ಕ್ಕೆ ಉತ್ತರ ಪ್ರದೇಶದ ಹಳ್ಳಿಯೊಂದರಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾಜೀ ಅವರು ಈ ಯಾತ್ರೆಯನ್ನು ಉದ್ಘಾಟಿಸುವರು. ದೇಶದ ಎಲ್ಲ ಬಿಜೆಪಿ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಉದ್ಘಾಟನೆ ನೆರವೇರಲಿದೆ. ದೇಶದ ಎಲ್ಲ ಸಂಘಟನಾತ್ಮಕ ಜಿಲ್ಲೆಗಳಲ್ಲಿ ಎಲ್‍ಇಡಿ ಮುಖಾಂತರ ರಾಷ್ಟ್ರೀಯ ಅಧ್ಯಕ್ಷರ ಉದ್ಘಾಟನೆ ಕಾರ್ಯಕ್ರಮದ ಪ್ರಸಾರ ಇರಲಿದೆ. ಅದರ ವೀಕ್ಷಣೆ ನಡೆಯಲಿದೆ ಎಂದರು. 

ರಾಷ್ಟ್ರೀಯ ಕಿಸಾನ್ ಮೋರ್ಚಾ ಅಧ್ಯಕ್ಷ ರಾಜ್‍ಕುಮಾರ್ ಚಾಹರ್ ಅವರು ಗ್ರಾಮ ಪರಿಕ್ರಮ ಯಾತ್ರೆ ಹಮ್ಮಿಕೊಳ್ಳಲು ತಿಳಿಸಿದ್ದು, ರಾಜ್ಯದ ನಾಲ್ಕೈದು ನಗರ ಪ್ರದೇಶ ಹೊರತುಪಡಿಸಿ ರಾಜ್ಯದ 32 ಸಂಘಟನಾತ್ಮಕ ಜಿಲ್ಲೆಗಳಲ್ಲಿ ಏಕಕಾಲಕ್ಕೆ ಕಾರ್ಯಕ್ರಮದ ಉದ್ಘಾಟನೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ರೈತ ಮೋರ್ಚಾದ ಪದಾಧಿಕಾರಿಗಳು ಸೇರಿ ಎಲ್ಲ ಹಂತದ ಜನಪ್ರತಿನಿಧಿಗಳು ಪಾಲ್ಗೊಳ್ಳುತ್ತಾರೆ ಎಂದು ವಿವರಿಸಿದರು.

ಕಾರ್ಯಕ್ರಮ ಪ್ರಾರಂಭಕ್ಕೆ ಮೊದಲು ಗೋಪೂಜೆ ಮಾಡಲಾಗುವುದು. 30 ದಿನಗಳ ಕಾಲ ಪರಿಕ್ರಮ ಯಾತ್ರೆ ಇರುತ್ತದೆ. ಪ್ರತಿದಿನ ಪ್ರತಿ ಜಿಲ್ಲೆಯ 5 ಹಳ್ಳಿಗಳಿಗೆ ಪ್ರವಾಸ ಮಾಡಲಾಗುವುದು. ರೈತರ ಸಮಸ್ಯೆ ಆಲಿಸುವುದು ಮತ್ತು ಅವರ ಬೇಕು ಬೇಡಗಳನ್ನು ಪಟ್ಟಿ ಮಾಡಿ ರೈತ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷರ ಮುಖಾಂತರ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಿಗೆ ತಲುಪಿಸಲಾಗುವುದು. ಭವಿಷ್ಯದಲ್ಲಿ ನಮ್ಮ ಸರಕಾರದ ಯೋಜನೆ ಮತ್ತು ಪಕ್ಷದ ಪ್ರಣಾಳಿಕೆ ರೂಪಿಸುವಲ್ಲಿ ರೈತರ ಸಲಹೆಗಳನ್ನು ಅಳವಡಿಸಿಕೊಳ್ಳುವುದೇ ಯಾತ್ರೆಯ ಪ್ರಮುಖ ಉದ್ದೇಶ ಎಂದು ವಿವರಿಸಿದರು.

ನರೇಂದ್ರ ಮೋದಿಜೀ ಅವರ ಕೇಂದ್ರ ಸರಕಾರವು ಗ್ರಾಮೀಣ ಜನರಿಗಾಗಿ ಅನುಷ್ಠಾನಕ್ಕೆ ತಂದ ಯೋಜನೆಗಳನ್ನು ಮನವರಿಕೆ ಮಾಡಿಕೊಡಲಿದ್ದೇವೆ. ಬಿಜೆಪಿಯ ಸರಕಾರವು ಕರ್ನಾಟಕದಲ್ಲಿ ಅಧಿಕಾರದಲ್ಲಿ ಇದ್ದಾಗ ಜಾರಿಗೊಳಿಸಿದ ರೈತಪರ ಕಾರ್ಯಕ್ರಮಗಳ ಕುರಿತು ಎಲ್ಲ ರೈತರು ಮತ್ತು ಗ್ರಾಮೀಣ ಪ್ರದೇಶದ ಜನರಿಗೆ ಜಾಗೃತಿ ಮೂಡಿಸಲಿದ್ದೇವೆ ಎಂದು ವಿವರ ನೀಡಿದರು.

 

Leave a Reply

Your email address will not be published. Required fields are marked *