ಕಾರ್ಕಳ : ಕಾರ್ಕಳದ ಗಾಂಧಿ ಮೈದಾನದ ಸಮೀಪ ಇರುವ ಶಾಖಾ ಗ್ರಂಥಾಲಯದ ನೂತನ ಕಟ್ಟಡದ ಕಾಮಗಾರಿ ಪೂರ್ಣಗೊಂಡಿದ್ದು, ಅದರ ಉದ್ಘಾಟನಾ ಸಮಾರಂಭವು ಫೆ.28ರಂದು ಬೆಳಿಗ್ಗೆ 10 ಗಂಟೆಗೆ ನಡೆಯಲಿದೆ.
ಒಂದಿಷ್ಟು ಇತಿಹಾಸ:
ಕಾರ್ಕಳದ ಮೊಟ್ಟಮೊದಲ ಸರಕಾರಿ ಗ್ರಂಥಾಲಯವು ಅನಂತಶಯನದಲ್ಲಿ 1956ರಲ್ಲಿ ಆರಂಭವಾಯಿತು. ಆಗಿನ ಭುವನೇಂದ್ರ ಕಾಲೇಜಿನ ಪ್ರೊಫೆಸರ್ ರಘುನಾಥ್ ಭಟ್ ಅದರ ಮೊದಲ ಗ್ರಂಥಪಾಲಕರಾಗಿ ಆರು ವರ್ಷ ಸೇವೆ ಸಲ್ಲಿಸಿದರು. ಮುಂದೆ ಸುದೀರ್ಘ ಮೂವತ್ತಾರು ವರ್ಷ ಕೆ. ಗೋವಿಂದ ರಾವ್ ಅವರು ಸೇವೆ ಸಲ್ಲಿಸಿ ಗ್ರಂಥಾಲಯದ ಅಭಿವೃದ್ಧಿಗೆ ಕಾರಣವಾಗಿ ಅನೇಕ ಪ್ರಶಸ್ತಿಗಳನ್ನು ಪಡೆಯುವು ಜೊತೆಗೆ ರಾಜ್ಯ ಪ್ರಶಸ್ತಿಯ ಗೌರವಕ್ಕೆ ಪಾತ್ರರಾದರು.
ಗ್ರಂಥಾಲಯವು ಅನಂತಶಯನದಿAದ ಟಾಟಾ ಗ್ಯಾರೇಜ್ ,ಅಲ್ಲಿಂದ ಆನೆಕೆರೆ, ಮುಂದೆ ಈಗಿನ ಗಾಂಧಿಮೈದಾನದ ಸಮೀಪ ಸ್ವಂತ ಕಟ್ಟಡಕ್ಕೆ ಸ್ಥಳಾಂತರವಾಯಿತು. ಮುಖ್ಯಮಂತ್ರಿಯಾಗಿದ್ದ ಎಂ. ವೀರಪ್ಪ ಮೊಯ್ಲಿ ಅವರು ಆ ಹಿಂದಿನ ಕಟ್ಟಡಕ್ಕೆ ಅನುದಾನವನ್ನು ಕೊಡಿಸಿ ತಾವೇ ಬಂದು ಉದ್ಘಾಟನೆ ಮಾಡಿದ್ದರು. ಮುಂದೆ ಓದುಗರ ಸಂಖ್ಯೆಯೂ ಹೆಚ್ಚಾಯಿತು. ಆನಂತರ 11 ವರ್ಷ ಜಯಶ್ರೀ ಎಂ ಅವರು ಗ್ರಂಥಪಾಲಕರಾಗಿ ಉತ್ತಮ ಸೇವೆ ಸಲ್ಲಿಸಿದರು. ಈಗ ವನಿತಾ ಅವರು ಕಳೆದ 13 ವರ್ಷಗಳಿಂದ ಗ್ರಂಥಪಾಲಕಿ ಆಗಿದ್ದಾರೆ.
ಇದು ಕೇವಲ ಗ್ರಂಥಾಲಯ ಅಲ್ಲ!:
ಗ್ರಂಥಾಲಯದ ಬಗ್ಗೆ ಸ್ಪಷ್ಟವಾದ ವಿಷನ್ ಹೊಂದಿರುವ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ವಿ. ಸುನೀಲ್ ಕುಮಾರ್ ಅವರು ಈ ಗ್ರಂಥಾಲಯದ ನೂತನ ಕಟ್ಟಡವನ್ನು ಒಂದು ಕೋಟಿ ರೂ. ಸರಕಾರದ ಅನುದಾನದ ಮೂಲಕ ಕಾರ್ಕಳಕ್ಕೆ ತಂದಿದ್ದಾರೆ. ಅದರಲ್ಲಿ ಡಿಜಿಟಲ್ ಗ್ರಂಥಾಲಯ, ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಕೇಂದ್ರಗಳ ಸೇರ್ಪಡೆ ಮಾಡಲಾಗಿದೆ. ನೂತನ ಕಟ್ಟಡವು 5400 ಚದರ ಅಡಿ ವಿಸ್ತಾರವಿದ್ದು, ಅಂದಾಜು 50,000 ಪುಸ್ತಕಗಳು ಇವೆ. 18 ನಿಯತಕಾಲಿಕೆ, 24 ವಾರ ಪತ್ರಿಕೆ, ಹತ್ತು ದಿನಪತ್ರಿಕೆ ಓದುಗರಿಗೆ ಲಭ್ಯ ಇವೆ. ಅಂದಾಜು 8,000 ಓದುಗರಿದ್ದಾರೆ. ಒಂದು ಲಕ್ಷ ಡಿಜಿಟಲ್ ಓದುಗರಿದ್ದಾರೆ.
ಪ್ರೊಫೆಸರ್ ಎಂ.ರಾಮಚAದ್ರ, ಶ್ರೀನಿವಾಸ ಪೈ ಮೊದಲಾದ ದಾನಿಗಳು ಗ್ರಂಥಾಲಯಕ್ಕೆ ಈ ಹಿಂದೆ ನೂರಾರು ಪುಸ್ತಕಗಳ ಕೊಡುಗೆ ನೀಡಿದ್ದಾರೆ. ಗೋಂವಿAದ ಪೈ ಮತ್ತು ಶುಭದರಾವ್ ನಿಯತಕಾಲಿಕೆ ಮತ್ತು ದಿನ ಪತ್ರಿಕೆಗಳನ್ನು ಕೊಡುಗೆಯಾಗಿ ನೀಡುತ್ತಿದ್ದಾರೆ.
ಈಗ ನೂತನ ಕಟ್ಟಡದಲ್ಲಿ ಉದ್ಯಮಿಗಳಾದ ಬೋಳ ದಾಮೋದರ್ ಕಾಮತ್ ಅವರು ತಮ್ಮ ಸಿ ಎಸ್ ಆರ್ ನಿಧಿಯ ಮೂಲಕ ಸ್ಪರ್ಧಾತ್ಮಕ ಪರೀಕ್ಷೆಗಳ ಮತ್ತು ಡಿಜಿಟಲ್ ಗ್ರಂಥಾಲಯ ವಿಭಾಗಕ್ಕೆ ಆರು ಕಂಪ್ಯೂಟರ್ ಮತ್ತು ಸಂಪೂರ್ಣ ಫರ್ನೀಚರ್ ಒದಗಿಸಿಕೊಟ್ಟಿದ್ದಾರೆ. (ಕೊಡುಗೆ 20 ಲಕ್ಷ ರೂಪಾಯಿ). ಇದರಿಂದ ಹೆಚ್ಚು ಯುವ ಓದುಗರನ್ನು ಗ್ರಂಥಾಲಯಕ್ಕೆ ಆಕರ್ಷಣೆ ಮಾಡುವ ಪ್ರಯತ್ನ ನಡೆದಿದೆ. ಓದುವ ಸಂಸ್ಕೃತಿ ಜೀವಂತವಾಗಿರುವ ಕಾರ್ಕಳದಲ್ಲಿ ಈ ನೂತನ ಗ್ರಂಥಾಲಯವು ಒಂದು ಉತ್ತಮ ಕೊಡುಗೆ ಆಗಲಿದೆ.