ಮೈಸೂರು: ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘ ಮತ್ತು ವಿಜಯಪುರ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸಹಕಾರದಿಂದ ಫೆ.4 ಮತ್ತು 5 ರಂದು ವಿಜಯಪುರದ ಶ್ರೀ ಕಂದಗಲ್ ಹಣಮಂತರಾಯ ರಂಗ ಮಂದಿರದಲ್ಲಿ 37ನೇ ರಾಜ್ಯ ಪತ್ರಕರ್ತರ ಸಮ್ಮೇಳನ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಶಿವಾನಂದ ತಗಡೂರು ತಿಳಿಸಿದ್ದಾರೆ.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಸುದ್ದಿ ಗೋಷ್ಠಿಯಲ್ಲಿ ಮಾತನಾಡಿದ ಅವರು, ಫೆ.4ರಂದು ಬೆಳಗ್ಗೆ 10.30ಕ್ಕೆ ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನಿಧ್ಯದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಮ್ಮೇಳನ ಉದ್ಘಾಟಿಸಲಿದ್ದಾರೆ, ಸಚಿವ ಗೋವಿಂದ ಕಾರಜೋಳ ಸ್ಮರಣ ಸಂಚಿಕೆ ಬಿಡುಗಡೆ ಮಾಡಲಿದ್ದು, ಸಚಿವ ಮುರುಗೇಶ ನಿರಾಣಿ ವ್ಯಂಗ್ಯಚಿತ್ರ ಪ್ರದರ್ಶನಕ್ಕೆ ಚಾಲನೆ ನೀಡಲಿದ್ದಾರೆ. ಸಚಿವ ಸಿ.ಸಿ.ಪಾಟೀಲ್ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಲಿದ್ದು, ಹಲವು ಗಣ್ಯರು ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ ಎಂದರು.
ಫೆ.4 ರಂದು ಮಧ್ಯಾಹ್ನ 2ಕ್ಕೆ ನವಮಾಧ್ಯಮಗಳು ಮತ್ತು ಪತ್ರಕರ್ತರು ಎಂಬ ವಿಚಾರಗೋಷ್ಠಿ ಕನ್ನಡ ಪ್ರಭ ಮತ್ತು ಸುವರ್ಣ ನ್ಯೂಸ್ ಪತ್ರಿಕೆ ಸಂಪಾದಕ ರವಿ ಹೆಗಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಲಿದ್ದು ಹಿರಿಯ ಪತ್ರಕರ್ತ ಅನಂತ ಚಿನಿವಾರ ಉದ್ಘಾಟಿಸುವರು. ಗಡಿ ಭಾಗದಲ್ಲಿ ಮಾಧ್ಯಮ ಗೋಷ್ಠಿಯನ್ನು ಗಡಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ.ಸಿ.ಸೋಮಶೇಖರ ಉದ್ಘಾಟಿಸುವರು. ಮಾಧ್ಯಮ ಅಕಾಡೆಮಿ ಅಧ್ಯಕ್ಷ ಸದಾಶಿವ ಶೆಣೈ ಅಧ್ಯಕ್ಷತೆ ವಹಿಸುವರು. ಸಂಜೆ ಪ್ರತಿನಿಧಿಗಳ ಸಮಾವೇಶ ನಡೆಯಲಿದೆ ಎಂದರು.
ಫೆ.5 ರಂದು ಬೆಳಿಗ್ಗೆ ಸುದ್ದಿ ಮನೆ ಮತ್ತು ಪತ್ರಿಕಾ ವಿತರಕರ ಕುರಿತ ಗೋಷ್ಠಿಯನ್ನು ಐಎಫ್ ಡಬ್ಲ್ಯೂಜೆ ಅಧ್ಯಕ್ಷ ಬಿ.ವಿ.ಮಲ್ಲಿಕಾರ್ಜುನಯ್ಯ ಉದ್ಘಾಟಿಸುವರು. ಐಎಫ್ ಡಬ್ಲ್ಯೂಜೆ ಸಂಚಾಲಕ ಎಚ್.ಬಿ.ಮದನಗೌಡ ಅಧ್ಯಕ್ಷತೆ ವಹಿಸುವರು. ಮಾಧ್ಯಮ ಅಕಾಡೆಮಿ ಸದಸ್ಯರಾದ ಸಿ.ಕೆ.ಮಹೇಂದ್ರ, ಕೆ.ವಿ.ಶಿವಕುಮಾರ್, ದೇವೇಂದ್ರಪ್ಪ ಕಪನೂರ, ಜಗನ್ನಾಥ ಶೆಟ್ಟಿ ಬಾಳ, ರಾಜ್ಯ ಪತ್ರಿಕಾ ವಿತರಕರ ಒಕ್ಕೂಟದ ಅಧ್ಯಕ್ಷ ಕೆ.ಶಂಭುಲಿAಗ ಭಾಗವಹಿಸುವರು ಎಂದರು.
ಸುದ್ದಿ ಮನೆ ಮತ್ತು ಮಹಿಳೆಯರು ಗೋಷ್ಠಿಯನ್ನು ಕಸ್ತೂರಿ ಸಂಪಾದಕಿ ಶಾಂತಲಾ ಧರ್ಮರಾಜ್ ಉದ್ಘಾಟಿಸುವರು. ಪತ್ರಕರ್ತರಾದ ಆಯೇಶಖಾನಂ, ಬಿ.ಕೆ.ಸುಮತಿ, ಕೆ.ಬಿ.ಶುಭ, ಸವಿತಾ ರೈ, ಸುಧಾರಾಣಿ, ಶೀಲಾ ಪ್ರತಾಪ ಸಿಂಹ ತಿವಾರಿ, ಎಂ.ಆರ್.ಸತ್ಯನಾರಾಯಣ ಭಾಗವಹಿಸುವರು ಎಂದರು.
ಫೆ.5ರ ಮಧ್ಯಾಹ್ನ 1.45ಕ್ಕೆ ಸಮಾರೋಪ ಸಮಾರಂಭ ಹಮ್ಮಿಕೊಂಡಿದ್ದು, ವಿಜಯಪುರ ಜ್ಞಾನಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಸಾನಿಧ್ಯ ವಹಿಸಲಿದ್ದಾರೆ. ಸಚಿವ ಜೆ.ಸಿ.ಮಾಧುಸ್ವಾಮಿ ಸಮಾರೋಪ ಭಾಷಣ ಮಾಡಲಿದ್ದು, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿವಿಧ ಪ್ರಶಸ್ತಿಗಳನ್ನು ಪ್ರದಾನ ಮಾಡಲಿದ್ದಾರೆ. ಸಚಿವರಾದ ಆರ್.ಅಶೋಕ್, ಶಶಿಕಲಾ ಜೊಲ್ಲೆ, ಡಾ.ಕೆ.ಸುಧಾಕರ, ಮಾಜಿ ಸಚಿವರಾದ ಎಂ.ಬಿ.ಪಾಟೀಲ್, ಶಿವಾನಂದ ಪಾಟೀಲ್, ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಉಪಸ್ಥಿತರಿರುವರು ಎಂದರು.
ರಾಜ್ಯ ಸಂಘದ ಉಪಾಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯ ಬಿ.ರಾಘವೇಂದ್ರ, ಮೈಸೂರು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಎಂ.ಸುಬ್ರಹ್ಮಣ್ಯ, ನಗರ ಉಪಾಧ್ಯಕ್ಷ ಎಂ.ಎಸ್. ಬಸವಣ್ಣ, ಗ್ರಾಮಾಂತರ ಉಪಾಧ್ಯಕ್ಷ ಧರ್ಮಾಪುರ ನಾರಾಯಣ್, ನಗರ ಕಾರ್ಯದರ್ಶಿ ರಂಗಸ್ವಾಮಿ ಮತ್ತಿತರರು ಉಪಸ್ಥಿತರಿದ್ದರು.