ಮಂಗಳೂರು : ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ನಂದಾವರದಲ್ಲಿ ಗುಡ್ಡ ಕುಸಿದು ಮನೆಯೊಳಗಿದ್ದ ಮಹಿಳೆ ಮೃತಪಟ್ಟಿದ್ದು, ಘಟನಾ ಸ್ಥಳಕ್ಕೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್ ಭೇಟಿ ನೀಡಿದ್ದಾರೆ.
ಬೆಳಗ್ಗೆ 6 ಗಂಟೆ ಸುಮಾರಿಗೆ ಈ ಘಟನೆ ನಡೆದಿದ್ದು, ಗುಡ್ಡ ಕುಸಿಯುವ ವೇಳೆ ಮನೆಯಲ್ಲಿ ತಾಯಿ, ಮಗಳು ಇದ್ದರು. ಗುಡ್ಡ ಕುಸಿತವಾದಾಗ ಸ್ಥಳೀಯರು ಸಹಾಯಕ್ಕೆ ಧಾವಿಸಿದ್ದು ತಾಯಿ ಮಗಳನ್ನು ರಕ್ಷಣೆ ಮಾಡಲು ಯತ್ನಿಸಿದ್ದಾರೆ. ಆದರೆ ಮಗು ಬದುಕುಳಿದು ತಾಯಿ ಮೃತಪಟ್ಟಿದ್ದಾರೆ.
ಕೆಲ ದಿನಗಳ ಹಿಂದೆಯೇ ಪಿಡಿಓ ಬಂದು ಮನೆ ಖಾಲಿ ಮಾಡಿ ಬೇರೆ ಜಾಗ ಅಥವಾ ಕಾಳಜಿ ಕೇಂದ್ರಕ್ಕೆ ಹೋಗುವಂತೆ ಸೂಚಿಸಿ ನೋಟೀಸ್ ಕೊಟ್ಟಿದ್ದರು. ಇವರು ಧೈರ್ಯ ಮಾಡಿ ಅದೇ ಮನೆಯಲ್ಲಿ ಉಳಿದಿದ್ದರು. ನೋಟಿಸ್ ಕೊಟ್ಟ ಬಳಿಕ ಮನೆ ಖಾಲಿ ಮಾಡಿದ್ದರೆ ಇಂಥ ದುರ್ಘಟನೆ ನಡೆಯುತ್ತಿರಲಿಲ್ಲ. ಈ ಘಟನೆ ಬಳಿಕ ನಾನು ತಕ್ಷಣ ಎಲ್ಲಾ ಅಧಿಕಾರಿಗಳಿಗೂ ಒಂದು ಆದೇಶ ನೀಡ್ತಾ ಇದ್ದೇನೆ. ದ.ಕ ಜಿಲ್ಲೆಯಾದ್ಯಂತ ಇರುವ ಇಂತಹ ಸೂಕ್ಷ್ಮ ಪ್ರದೇಶಗಳಿಗೆ ತೆರಳಿ ಗುಡ್ಡದ ಸುತ್ತಮುತ್ತ ಕೆಳಭಾಗದಲ್ಲಿ ಇರುವ ಮನೆಗಳನ್ನು ಖಾಲಿ ಮಾಡಿಸಿ ಜನರನ್ನು ತಕ್ಷಣ ಕಾಳಜಿ ಕೇಂದ್ರಗಳಿಗೆ ಸ್ಥಳಾಂತರಿಸಬೇಕು. ಇಲ್ಲದೇ ಇದ್ದರೆ ಜಿಲ್ಲಾ ದಂಡಾಧಿಕಾರಿಯಾಗಿ ಕಾನೂನು ಬಲ ಪ್ರಯೋಗಿಸಿ ಖಾಲಿ ಮಾಡಿಸುತ್ತೇವೆ ಎಂದರು ಜಿಲ್ಲಾಧಿಕಾರಿ ಹೇಳಿದ್ದಾರೆ.
ಪೊಲೀಸರ ನೆರವಿನೊಂದಿಗೆ ಇಂಥ ಅಪಾಯದ ಮನೆಗಳ ಕುಟುಂಬಗಳನ್ನು ತೆರವು ಮಾಡುತ್ತೇವೆ. ದಯವಿಟ್ಟು ಸಾರ್ವಜನಿಕರು ಸಹಕರಿಸಿ, ನಮಗೆ ಮೊದಲು ಜನರ ಜೀವ ಮುಖ್ಯ. ಸದ್ಯ ಮೃತಪಟ್ಟಿರುವ ಈ ಕುಟುಂಬಕ್ಕೆ ಐದು ಲಕ್ಷ ಪರಿಹಾರ ನೀಡಲಾಗುವುದು ಎಂದು ಭರವಸೆ ನೀಡಿದರು.