ಕಾರ್ಕಳ: ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿರುವುದನ್ನು ಖಂಡಿಸಿ ಗಣಿ ಹಾಗೂ ಲಾರಿ ಚಾಲಕ ಮಾಲಕರ ಸಂಘಟನೆಗಳು ಗುರುವಾರದಿಂದ ಕಾರ್ಕಳ ತಾಲೂಕು ಕಚೇರಿ ಮುಂಭಾಗದಲ್ಲಿ ನಡೆಯುತ್ತಿರುವ ಅನಿರ್ದಿಷ್ಟಾವಧಿ ಪ್ರತಿಭಟನೆ ಇಂದು ಕೂಡ ಮುಂದುವರಿದಿದ್ದು,ಗಣಿಗಾರಿಕೆ ಕುರಿತ ಬಿಕ್ಕಟ್ಟು ಇನ್ನೂ ಬಗೆಹರಿಯುವ ಲಕ್ಷಣಗಳು ಗೋಚರಿಸುತ್ತಿಲ್ಲ.
ಕೃಷಿ ಜಮೀನಿನಲ್ಲಿ ಕೆಂಪುಕಲ್ಲು ,ಕಪ್ಪುಕಲ್ಲು ತೆಗೆಯುವ ವಿಚಾರದಲ್ಲಿ ಸರ್ಕಾರ ನೀಡುತ್ತಿದ್ದ 3ಎ ಪರವಾನಗಿ ಈ ಹಿಂದೆ ಸ್ಥಗಿತಗೊಳಿಸಲಾಗಿದ್ದರೂ,ಮನೆ ಕಟ್ಟುವವರಿಗೆ ತೊಂದರೆಯಾಗಬಾರದು ಎಂದು ಮಾನವೀಯ ನೆಲೆಯಲ್ಲಿ ಸರ್ಕಾರಕ್ಕೆ ದಂಡನೆ ಶುಲ್ಕ ಪಾವತಿಸಿ ಅವಕಾಶ ನೀಡಲಾಗಿತ್ತು, ಆದರೆ ಕಳೆದ15 ದಿನಗಳಿಂದ ಜಿಲ್ಲಾಡಳಿತ ಎಲ್ಲಾ ಕಟ್ಟಡ ಸಾಮಾಗ್ರಿಗಳ ಸಾಗಾಟಕ್ಕೆ ನಿರ್ಬಂಧ ವಿಧಿಸಿದ್ದು ಇದರಿಂದ ಗಣಿ ಹಾಗೂ ಲಾರಿ ಚಾಲಕ ಮಾಲಕರು ಬೀದಿಪಾಲಾಗಿದ್ದಾರೆ.ತಕ್ಷಣವೇ ಸರ್ಕಾರ ಕಾನೂನುಬದ್ಧ ಗಣಿಗಾರಿಕೆಗೆ ಅವಕಾಶ ಮಾಡಿಕೊಡುವ ಮೂಲಕ ನಮಗೆ ಬದುಕಲು ಅವಕಾಶ ಮಾಡಿಕೊಡವೇಕೆಂದು ಧರಣಿನಿರತರು ಒತ್ತಾಯಿಸಿದ್ದಾರೆ.
ಗುರುವಾರ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಜಿಲ್ಲಾಡಳಿತ ಹಾಗೂ ಶಾಸಕರ ಸಭೆ ನಡೆದಿದ್ದು,ಯಥಾಸ್ಥಿತಿಯನ್ನು ಕಾಪಾಡುವಂತೆ ಮಾಡಿರುವ ಮನವಿಗೆ ಸಭೆಯಲ್ಲಿ ಸ್ಪಂದನೆ ವ್ಯಕ್ತ ವಾಗದ ಹಿನ್ನೆಲೆಯಲ್ಲಿ ಧರಣಿ ಶನಿವಾರವೂ ಮುಂದುವರಿಯಲಿದೆ ಎಂದು ಪ್ರತಿಭಟನಾಕಾರರು ಸ್ಪಷ್ಟಪಡಿಸಿದ್ದಾರೆ.
ಸುಮಾರು250 ಕ್ಕೂ ಅಧಿಕ ಲಾರಿಗಳನ್ನು ಕಾರ್ಕಳ ತಾಲೂಕು ಕಚೇರಿ ಸುತ್ತಮುತ್ತ ನಿಲ್ಲಿಸಲಾಗಿದ್ದು ಲಾರಿ ಚಾಲಕರು ಹಾಗೂ ಗಣಿ ಕಾರ್ಮಿಕರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದು ಅವರಿಗೆ ಊಟ ಉಪಹಾರದ ವ್ಯವಸ್ಥೆ ಕಲ್ಪಿಸಲಾಗಿದೆ. ಕಳೆದ 15 ದಿನಗಳಿಂದ ಕೆಲಸವಿಲ್ಲದೇ ಕುಟುಂಬ ನಿರ್ವಹಣೆ ಕಷ್ಟವಾಗಿದೆ ಎಂದು ಲಾರಿ ಚಾಲಕರು, ಗಣಿ ಕಾರ್ಮಿಕರು ತಮ್ಮ ಅಳಲು ತೋಡಿಕೊಂಡಿದ್ದಾರೆ. ವಿಶೇಷವಾಗಿ ಮಹಿಳಾ ಕಾರ್ಮಿಕರು ಕೂಡ ಧರಣಿಯಲ್ಲಿ ಪಾಲ್ಗೊಳ್ಳುವ ಮೂಲಕ ಗಮನಸೆಳೆದಿದ್ದಾರೆ