ಕಾರ್ಕಳ: ಭಾರತ ದೇಶ ಹಳ್ಳಿಗಳ ಹಾಗೂ ರೈತರ ದೇಶವಾಗಿದ್ದು ಕೃಷಿಯೇ ಪ್ರಧಾನವಾಗಿದೆ. ಗಾಂಧೀಜಿಯವರ ಗ್ರಾಮಸ್ವರಾಜ್ಯ ಕನಸನ್ನು ನನಸಾಗಿಸುವ ನಿಟ್ಟಿನಲ್ಲಿ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ನರೇಗಾ ಯೋಜನೆಯನ್ನು ಜಾರಿಗೊಳಿಸುವ ಮೂಲಕ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಜತೆಗೆ ಗ್ರಾಮ ಪಂಚಾಯಿತಿಗಳಿಗೆ ಬಲಬಂದಿದೆ ಎಂದು ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಹೇಳಿದರು.
ಅವರು ಸೋಮವಾರ ಕಾರ್ಕಳ ತಾಲೂಕಿನ ಮುಡಾರು ಗ್ರಾಮದ ಬಜಗೋಳಿಯಲ್ಲಿ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಸುಮಾರು 75 ಲಕ್ಷ ರೂಪಾಯಿ ಅನುದಾನದಲ್ಲಿ ನಿರ್ಮಾಣವಾಗಿದ್ದ ನೂತನ ವಾಣಿಜ್ಯ ಸಂಕೀರ್ಣ ಹಾಗೂ ಮಾರುಕಟ್ಟೆ ಸಂಕೀರ್ಣವನ್ನು ಉದ್ಘಾಟಿಸಿ ಮಾತನಾಡಿದರು. ಮಹಿಳಾ ಸಬಲೀಕರಣಕ್ಕಾಗಿ ನಮ್ಮ ಸರ್ಕಾರ ಬದ್ಧವಾಗಿದ್ದು ಸರ್ಕಾರದ 5 ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಟಾನಗೊಳಿಸುವುದೇ ನನ್ನ ಮಹತ್ತರ ಹೊಣೆಗಾರಿಕೆಯಾಗಿದೆ ಎಂದರು

ಶಾಸಕ ಸುನಿಲ್ ಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ,ಬಜಗೋಳಿಯು ಪ್ರವಾಸಿ ಕೇಂದ್ರಗಳನ್ನು ಸಂಪರ್ಕಿಸುವ ಪ್ರಮುಖ ಊರಾಗಿದ್ದು ಇಲ್ಲಿ ನಿತ್ಯ ಸಾವಿರಾರು ಯಾತ್ರಾರ್ಥಿಗಳು ಓಡಾಡುವ ಮೂಲಕ ಆರ್ಥಿಕತೆ ಹಾಗೂ ಪ್ರವಾಸೋದ್ಯಮಕ್ಕೂ ಬಲಬಂದಿದೆ ಎಂದರು. ಗ್ರಾಮ ಪಂಚಾಯಿತಿಗಳು ಪಟ್ಟಣಗಳಾಗಿ ಬೆಳೆದಾಗ ತ್ಯಾಜ್ಯ ವಿಲೇವಾರಿ ಬಹುದೊಡ್ಡ ಸವಾಲಾಗಿ ಪರಿಣಮಿಸಲಿದೆ. ಮಾನವ ತ್ಯಾಜ್ಯ ವಿಲೇವಾರಿ ಮಾಡುವ ನಿಟ್ಟಿನಲ್ಲಿ ರಾಜ್ಯದಲ್ಲೇ ಪ್ರಥಮ ಬಾರಿಗೆ ಕಾರ್ಕಳ ಪುರಸಭೆಯಲ್ಲಿ ಎಫ್ ಎಸ್. ಎಲ್.ಎಮ್ ಘಟಕ ಸ್ಥಾಪಿಸಲಾಗಿದೆ..ಈಗಾಗಲೇ ಬಜಗೋಳಿ ಹಾಗೂ ಬೆಳ್ಮಣ್ಣಿನಲ್ಲಿ ಯುಜಿಡಿ ಸಮಸ್ಯೆ ಎದುರಾಗಿದ್ದು ಇದಕ್ಕೆ ಪರಿಹಾರ ಕಂಡುಕೊಳ್ಳುವ ಭರವಸೆ ನೀಡಿದರು.ಇದರ ಜತೆಗೆ ಗ್ರಾಮ ಪಂಚಾಯಿತಿಗಳು ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ತಲುಪಿಸುವ ಸೇತುವೆಗಳಂತೆ ಕಾರ್ಯನಿರ್ವಹಿಸುತ್ತವೆ ಎಂದರು.
ಈ ಸಂದರ್ಭದಲ್ಲಿ ಮುಡಾರು ಗ್ರಾಮ ಪಂಚಾಯಿತಿ ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷೆ ಅಮೃತಾ ಪ್ರಭು, ಜಿಲ್ಲಾಧಿಕಾರಿ ಡಾ.ಕೆ ವಿದ್ಯಾಕುಮಾರಿ, ಜಿ.ಪಂ ಸಿಇಓ ಪ್ರಸನ್ನ ಎಚ್, ಎಸ್ಪಿ ಅಕ್ಷಯ್ ಎಂ, ಹಾಕೆ, ಸಹಾಯಕ ಕಮೀಷನರ್ ರಶ್ಮಿ ಎಸ್.ಆರ್, ಕಾರ್ಕಳ ತಹಶೀಲ್ದಾರ್ ಅನಂತಶAಕರ, ತಾ.ಪಂ ಇಓ ಗುರುದತ್ ಎಂ.ಎನ್ ಮುಂತಾದವರು ಉಪಸ್ಥಿತರಿದ್ದರು.
ವಿನಯಾ ಸ್ವಾಗತಿಸಿ, ಶಿಕ್ಷಕ ನಾಗೇಶ್ ಕಾರ್ಯಕ್ರಮ ನಿರೂಪಿಸಿದರು






