ಬೆಂಗಳೂರು:ಅನುಕಂಪದ ಆಧಾರದಲ್ಲಿ ಬಿಜೆಪಿ ಸರ್ಕಾರದ ಅವಧಿಯಲ್ಲಿ ನೇಮಕವಾಗಿದ್ದ ಪ್ರವೀಣ್ ನೆಟ್ಟಾರು ಪತ್ನಿ ನೂತನಾ ಅವರ ನೇಮಕಾತಿಯನ್ನು ಹಾಲಿ ಕಾಂಗ್ರೆಸ್ ಸರ್ಕಾರ ರದ್ದುಪಡಿಸಿರುವ ವಿಚಾರದಲ್ಲಿ ಸಚಿವ ರಾಮಲಿಂಗಾ ರೆಡ್ಡಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ರಾಮಲಿಂಗಾ ರೆಡ್ಡಿ, ಪ್ರವೀಣ್ ನೆಟ್ಟಾರು ಪತ್ನಿಗೆ ತಾತ್ಕಾಲಿಕ ಹುದ್ದೆಯನ್ನು ನೀಡುವ ಮೂಲಕ ಬಿಜೆಪಿ ಮೋಸ ಮಾಡಿದೆ ಎಂದು ಕಿಡಿಕಾರಿದ್ದಾರೆ. ಪ್ರವೀಣ್ ನೆಟ್ಟಾರು ಪತ್ನಿಗೆ ತಾತ್ಕಾಲಿಕ ಹುದ್ದೆ ಯಾಕೆ ಕೊಡ್ಬೇಕಿತ್ತು ಎಂದು ಪ್ರಶ್ನಿಸಿದ ಅವರು, ಬಿಜೆಪಿ ಅಧಿಕಾರದಲ್ಲಿದ್ದಾಗ ಖಾಯಂ ಉದ್ಯೋಗವನ್ನೇ ಕೊಡಬೇಕಿತ್ತು.ಅವರ ಬದುಕಿಗೆ ಶಾಶ್ವತ ವ್ಯವಸ್ಥೆ ಕಲ್ಪಿಸಬೇಕಿದ್ದ ಬಿಜೆಪಿ ತಾತ್ಕಾಲಿಕ ನೇಮಕಾತಿ ಆದೇಶ ನೀಡಿ ಮೋಸ ಮಾಡಿದೆ ಎಂದು ಆರೋಪಿಸಿದ್ದಾರೆ.
ಇದೇ ವಿಚಾರವಾಗಿ ಟ್ವೀಟ್ ಮಾಡಿರುವ ಕರ್ನಾಟಕ ಕಾಂಗ್ರೆಸ್, ಭ್ರಷ್ಟಾಚಾರವೇ ಕುಲದೈವ ಎಂದು ನಂಬಿರುವ ಬಿಜೆಪಿಗೆ ನೀತಿ ನಿಯಮಗಳನ್ನು ಅಧ್ಯಯನ ಮಾಡಲು ಆಸಕ್ತಿ ಮತ್ತು ಸಮಯ ಇರಲು ಸಾಧ್ಯವೇ? ನಿಯಮದ ಪ್ರಕಾರ ಸರ್ಕಾರ ಬದಲಾದಾಗ ತಾತ್ಕಾಲಿಕ ನೇಮಕಾತಿಗಳು ಸಹಜವಾಗಿ ರದ್ದಾಗುವುದು ಸಹಜ ಪ್ರಕ್ರಿಯೆ. ಬದುಕಿಗೆ ಶಾಶ್ವತ ದಾರಿ ತೋರಿಸದೆ ಇಂತಹ ಪೇಪರ್ ಚಾಕ್ಲೆಟ್ ನೀಡುವ ಮೂಲಕ ಬಿಜೆಪಿ ಪ್ರವೀಣ್ ಪತ್ನಿಗೆ ದ್ರೋಹವೆಸಗಿದೆ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದೆ.