Share this news

ಕೊಪ್ಪಳ : ರಾಜ್ಯದಲ್ಲಿ ಮಹಿಳೆಯರು ಬಸ್‌ನಲ್ಲಿ ಉಚಿತವಾಗಿ ಪ್ರಯಾಣಿಸುವ ಶಕ್ತಿ ಯೋಜನೆ ಜಾರಿಯಾದ ನಂತರ ಹಲವು ರೀತಿಯ ಅವಘಡಗಳು ನಡೆಯುತ್ತಿವೆ. ಬಸ್ ಗಳು ಫುಲ್ ರಷ್ ಆಗುವ ಹಿನ್ನಲೆ ಕಾದು ಕಾದು ಸುಸ್ತಾಗಿ ಮಹಿಳೆಯೊಬ್ಬಳು ಬಸ್‌ಗೆ ಕಲ್ಲು ಹೊಡೆದ ಘಟನೆ ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿ ನಡೆದಿದೆ.

ನಾಲ್ಕು ತಾಸು ಕಾಯ್ದರು ಬಸ್ ನಿಲ್ಲಿಸದ ಹಿನ್ನಲೆಯಲ್ಲಿ ಮಹಿಳೆಯೊಬ್ಬಳು ಬಸ್ ಗೆ ಕಲ್ಲೆಸೆದಿದ್ದಾಳೆ. ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿದ್ದ ನಾನ್‌ಸ್ಟಾಪ್ ಬಸ್‌ಗೆ ಬೇಜಾರಿನಿಂದಾಗಿ ತಲೆಕೆಟ್ಟಂತಾಗಿ ಕಲ್ಲು ಎಸೆದೆ ಎನ್ನುತ್ತಾಳೆ. ಇದರಿಂದಾಗಿ ಬಸ್ ಗಾಜು ಪುಡಿಪುಡಿಯಾಗಿದ್ದು, ಬಸ್ ಚಾಲಕ ಹಾಗು ನಿರ್ವಾಹಕ ಪ್ಯಾಸೆಂಜರ್ ಸಹಿತ ಬಸ್‌ನ್ನು ಮುನಿರಾಬಾದ್ ಪೊಲೀಸ್ ಠಾಣೆಗೆ ಬಸ್ ತಂದಿದ್ದರು.

ಪಾಪಿನಾಯಕಹಳ್ಳಿಯ ಲಕ್ಷ್ಮಿ ಹಾಗು ಆಕೆಯೊಂದಿಗೆ ಇನ್ನೋರ್ವ ಮಹಿಳೆ ಭಾನುವಾರ ಹುಲಿಗಿಯ ಶ್ರೀ ಹುಲಿಗೆಮ್ಮ ದೇವಿ ದರ್ಶನಕ್ಕೆ ಬಂದಿದ್ದರು. ಲಕ್ಷ್ಮಿ ತನ್ನ ತವರು ಮನೆ ಇಲಕಲ್‌ಗೆ ಹೋಗಬೇಕಾಗಿತ್ತು. ಇದರಿಂದಾಗಿ ಹೊಸಲಿಂಗಾಪುರ ಬಳಿ ಬಸ್‌ಗಾಗಿ ಕಾಯ್ದಿದ್ದಾಳೆ. ಸುಮಾರು ನಾಲ್ಕು ತಾಸು ಕಾಯ್ದು ಬಸ್‌ಗಳು ನಿಲ್ಲಿಸುವಂತೆ ಕೈ ಮಾಡಿದರೂ ನಿಲ್ಲಸದೆ ಇದ್ದಿದ್ದಕ್ಕೆ ಬೇಸರವಾಗಿ ಕಲ್ಲೆಸೆದಿದ್ದಾಗಿ ಹೇಳಿದ್ದಾಳೆ. ಹೊಸಪೇಟೆ ಡಿಪೋಗೆ ಸೇರಿದ ಕೆಎ 35, ಎಫ್ 252 ನಂಬರ್ ನ ಬಸ್‌ಗೆ ಕಲ್ಲು ಎಸೆದಿದ್ದರಿಂದ ಬಸ್‌ಗೆ ಹಾನಿಯಾಗಿತ್ತು. ಈ ಹಿನ್ನಲೆಯಲ್ಲಿ ಡ್ರೈವರ್ ಮುತ್ತಪ್ಪ ಕುಕನೂರು ಪೊಲೀಸ್ ಠಾಣೆಗೆ ಬಸ್ ತಂದು ದೂರು ನೀಡಲು ಮುಂದಾಗಿದ್ದರು.

 

ಪೊಲೀಸ್ ಠಾಣೆಯಲ್ಲಿ ಬಸ್ ಡ್ಯಾಮೇಜ್ ಹಿನ್ನೆಲೆ 5000ರೂ, ದಂಡ ನೀಡಬೇಕೆಂದು ಬಸ್ ಡಿಪೋ ಮ್ಯಾನೇಜರ್ ಕೇಳಿದರು. ದಂಡ ಕಟ್ಟದಿದ್ದರೆ ಪ್ರಕರಣ ದಾಖಲಿಸುವುದಾಗಿ ಲಕ್ಷ್ಮಿಗೆ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಆಗಲೇ ಕೋಪ ಶಮನವಾಗಿದ್ದರಿಂದ ಕ್ಷಮೆ ಕೇಳಿ ಪೊಲೀಸರಿಗೆ ಮನವಿ ಮಾಡಿ ದಂಡ ಕಟ್ಟಿದ್ದಾಳೆ. ಶಕ್ತಿ ಯೋಜನೆಯಿಂದ ಮಹಿಳೆಯರಿಗೆ ಅನುಕೂಲವಾಗಿದ್ದರೂ ಸರಿಯಾದ ಬಸ್ ವ್ಯವಸ್ಥೆ ಇಲ್ಲದೆ ಜನರು ವಿರೋಧ, ಆಕ್ರೋಶ ವ್ಯಕ್ತಪಡಿಸುವಂತಾಗುತ್ತಿದೆ.

Leave a Reply

Your email address will not be published. Required fields are marked *