Share this news

ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಗೃಹಜ್ಯೋತಿ ಯೋಜನೆಯ ಲಾಭದಿಂದ ಬಾಡಿಗೆ ಮನೆಯಲ್ಲಿ ವಾಸವಿರುವವರು ವಂಚಿತರಾಗುವ ಸಾಧ್ಯತೆಯಿದೆ. ಎಲ್ಲರಿಗೂ 200 ಯೂನಿಟ್‌ವರೆಗೂ ಉಚಿತವಾಗಿ ವಿದ್ಯುತ್‌ ನೀಡುವ ಈ ಯೋಜನೆಯ ಮಾರ್ಗಸೂಚಿಯನ್ನು ಇಂಧನ ಇಲಾಖೆ ಸೋಮವಾರ ಬಿಡುಗಡೆ ಮಾಡಿದ್ದು, ಅದರಲ್ಲಿ ವ್ಯಕ್ತಿಯೊಬ್ಬರು ತಮ್ಮ ಹೆಸರಿನಲ್ಲಿ ಹಲವು ಆರ್‌.ಆರ್‌.ಸಂಖ್ಯೆ ಹೊಂದಿದ್ದರೆ, ಆ ಪೈಕಿ ಒಂದಕ್ಕೆ ಮಾತ್ರ ಉಚಿತ ವಿದ್ಯುತ್‌ ಸೌಲಭ್ಯ ದೊರೆಯಲಿದೆ ಎಂದು ಸ್ಪಷ್ಟವಾಗಿ ನಮೂದಿಸಿದ್ದು,ಇದರಿಂದಾಗಿ ಬಾಡಿಗೆ ಮನೆಗಳಲ್ಲಿ ವಾಸಿಸುವವರು ಗೃಹಜ್ಯೋತಿ ಯೋಜನೆಯ ಲಾಭದಿಂದ ವಂಚಿತರಾಗಲಿದ್ದಾರೆ


ಏಕೆಂದರೆ ಮನೆ ಅಥವಾ ಕಟ್ಟಡದ ಮಾಲೀಕನೇ ತನ್ನ ಬಾಡಿಗೆ ಮನೆಗಳಿಗೆ ಅಳವಡಿಸಿರುವ ಎಲ್ಲಾ ವಿದ್ಯುತ್‌ ಸಂಪರ್ಕಗಳಿಗೆ ತನ್ನದೇ ಹೆಸರಿನಲ್ಲಿ ಆರ್‌.ಆರ್‌.ಸಂಖ್ಯೆ ಹೊಂದಿರುವ ಹಿನ್ನೆಲೆಯಲ್ಲಿ ಮಾರ್ಗಸೂಚಿ ಪ್ರಕಾರ ಆತನಿಗೆ ಒಂದು ಆರ್‌.ಆರ್‌. ಸಂಖ್ಯೆಗೆ ಮಾತ್ರ ಉಚಿತ ವಿದ್ಯುತ್ ಸೌಲಭ್ಯ ದೊರೆಯುತ್ತದೆ. ಹೀಗಾಗಿ ಉಳಿದ ಬಾಡಿಗೆದಾರರಿಗೆ ಈ ಸೌಲಭ್ಯ ದೊರೆಯುವ ಸಾಧ್ಯತೆಯಿಲ್ಲ.


ಈ ಹಿಂದೆ ನಡೆದಿದ್ದ ಸಚಿವ ಸಂಪುಟ ಸಭೆಯ ಬಳಿಕ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರು, ಬೆಂಗಳೂರಿನಲ್ಲಿ ಶೇ.60ರಷ್ಟು ಮಂದಿ ಬಾಡಿಗೆ ಮನೆಗಳಲ್ಲಿರುವವರೇ ಇದ್ದಾರೆ. ಇದು ಸರ್ಕಾರದ ಗಮನದಲ್ಲಿದೆ. ಬಾಡಿಗೆಗಿರುವ ಬಡವನ ಮನೆಯಲ್ಲೂ ಜ್ಯೋತಿ ಬೆಳಗಬೇಕು. ಹೀಗಾಗಿ ಬಾಡಿಗೆದಾರರನ್ನು ಹೊರಗಿಡುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದರು. ಆದರೆ, ಮಂಗಳವಾರ ಪ್ರಕಟಗೊಂಡಿರುವ ಮಾರ್ಗಸೂಚಿಯಲ್ಲಿ ಗೃಹ ವಿದ್ಯುತ್‌ ಬಳಕೆದಾರರ ಹೆಸರಿನಲ್ಲಿ ಒಂದಕ್ಕಿಂತ ಹೆಚ್ಚು ಸ್ಥಾವರಗಳಿದ್ದರೆ (ಆರ್‌.ಆರ್‌. ನಂಬರ್‌) ಒಂದು ಸ್ಥಾವರಕ್ಕೆ ಮಾತ್ರ ಯೋಜನೆಯಡಿ ಸೌಲಭ್ಯಕ್ಕೆ ಅರ್ಹರು ಎಂದು ಸ್ಪಷ್ಟವಾಗಿ ಹೇಳಲಾಗಿದೆ.

ಮಾರ್ಗಸೂಚಿಯಲ್ಲಿ ಯೋಜನೆ ಗೃಹ ಬಳಕೆಗೆ ಮಾತ್ರ ಅನ್ವಯವಾಗಲಿದ್ದು, ವಾಣಿಜ್ಯ ಉದ್ದೇಶಕ್ಕೆ ಈ ಯೋಜನೆ ಅನ್ವಯ ಆಗುವುದಿಲ್ಲ ಎಂದು ಸ್ಪಷ್ಟಪಡಿಸಲಾಗಿದೆ. ಜತೆಗೆ ಫಲಾನುಭವಿಗಳು ತಮ್ಮ ಕಸ್ಟಮರ್‌ ಐಡಿಯನ್ನು (ಬಳಕೆದಾರರ ಗುರುತಿನ ಸಂಖ್ಯೆ) ಆಧಾರ್‌ಗೆ ಜೋಡಿಸುವುದು ಕಡ್ಡಾಯವಾಗಿದೆ

Leave a Reply

Your email address will not be published. Required fields are marked *